ನವದೆಹಲಿ: ನಾಳೆ ಮೋದಿ 3.0 ಸರ್ಕಾರದ ಮೊದಲ ಪೂರ್ಣ ಪ್ರಮಾಣದ ಬಜೆಟ್ ಮಂಡನೆಯಾಗಲಿದೆ. ಕೇಂದ್ರ ಬಜೆಟ್ 2024 ನ್ನು ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಮಂಡಿಸಲಿದ್ದು, ಎಷ್ಟು ಗಂಟೆಗೆ ಬಜೆಟ್ ಮಂಡನೆಯಾಗಲಿದೆ ಎಂಬಿತ್ಯಾದಿ ವಿವರಗಳು ಇಲ್ಲಿದೆ.
ಇಂದಿನಿಂದ ಸಂಸತ್ ನಲ್ಲಿ ಬಜೆಟ್ ಅಧಿವೇಶನ ಶುರುವಾಗಿದೆ. ವಿತ್ತ ಸಚಿವೆ ಇಂದು ಕೇಂದ್ರದ ಆರ್ಥಿಕ ಸ್ಥಿತಿಗತಿಗಳ ಕುರಿತು ಸಂಸತ್ ನಲ್ಲಿ ವಿವರಣೆ ನೀಡಿದರು. ಈ ಬಜೆಟ್ ಮುಂದಿನ ಐದು ವರ್ಷಗಳಿಗೆ ಮಾರ್ಗಸೂಚಿಯಾಗಿರಲಿದೆ ಎಂದು ಪ್ರಧಾನಿ ಮೋದಿ ಈಗಾಗಲೇ ಹೇಳಿಕೆ ನೀಡಿದ್ದಾರೆ.
ಈ ಬಜೆಟ್ ನಲ್ಲಿ ಹಲವು ನಿರೀಕ್ಷೆಗಳನ್ನಿರಿಸಲಾಗಿದೆ. ಮಹಾರಾಷ್ಟ್ರ, ಜಾರ್ಖಂಡ್ ರಾಜ್ಯಗಳಲ್ಲಿ ಸದ್ಯದಲ್ಲೇ ಚುನಾವಣೆ ನಡೆಯಲಿದ್ದು, ಈ ರಾಜ್ಯಗಳಿಗೆ ಹೆಚ್ಚಿನ ಕೊಡುಗೆ ನಿರೀಕ್ಷಿಸಲಾಗಿದೆ. ಜೊತೆಗೆ ತೆರಿಗೆ ಮಿತಿ ಹೆಚ್ಚಳ, ಮೂಲ ಸೌಕರ್ಯಾಭಿವೃದ್ಧಿ ಯೋಜನೆಗಳಿಗೆ ಹೆಚ್ಚಿನ ಹಣ ಮೀಸಲಿಡುವ ನಿರೀಕ್ಷೆಯಿದೆ.
ನಾಳೆ 11 ಗಂಟೆಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಮಾಡಲಿದ್ದಾರೆ. ಇದು ಅವರು ಮಂಡಿಸುತ್ತಿರುವ ಏಳನೇ ಬಜೆಟ್ ಆಗಿರಲಿದೆ. ಬಜೆಟ್ ಮಂಡನೆಯ ನೇರಪ್ರಸಾರವನ್ನು ಸಂಸದ್ ಟಿವಿ ವಾಹಿನಿಯಲ್ಲಿ ನೇರಪ್ರಸಾರ ವೀಕ್ಷಿಸಬಹುದಾಗಿದೆ. ಈ ಬಾರಿ ಬಜೆಟ್ ನಲ್ಲಿ ವಿಕಸಿತ ಭಾರತ ಕನಸು ನನಸಾಗಿಸುವ ಯೋಜನೆಗಳನ್ನು ನಿರೀಕ್ಷಿಸಬಹುದಾಗಿದೆ.