ನವದೆಹಲಿ : 16 ವರ್ಷದ ಬಾಲಕಿಯ ಮೇಲೆ ದೆಹಲಿ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ಪ್ರೇಮೋದಯ್ ಖಾಖಾ ಅತ್ಯಾಚಾರ ಮಾಡಿದ ಪ್ರಕರಣ ವಿರುದ್ಧ ದೆಹಲಿ ಹೈಕೋರ್ಟ್ ಸ್ವಯಂ ದೂರು ದಾಖಲಿಸಿಕೊಂಡಿದೆ.
ಸೋಮವಾರ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾ. ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾ. ಸಂಜೀವ್ ನರುಲಾ ಅವರ ವಿಭಾಗೀಯ ಪೀಠವು ದೆಹಲಿ ಪೊಲೀಸ್ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ವರದಿಯನ್ನು ಕೇಳಿದ್ದು, ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 14 ಕ್ಕೆ ಮುಂದೂಡಿದೆ.
ತನ್ನ ಮೇಲೆ ಇತರ ಕೆಲವರು ಅತ್ಯಾಚಾರವೆಸಗಿದ್ದಾರೆ ಎಂದು ಬಾಲಕಿ ಬಹಿರಂಗಪಡಿಸಿದ್ದಾಳೆ. ಇದಕ್ಕೆ ಸಂಬಂಧಿಸಿದಂತೆ ಏನು ಕ್ರಮ ಕೈಗೊಂಡಿದ್ದೀರಿ ಎಂದು ಕೋರ್ಟ್ ಇಂದು ದೆಹಲಿ ಪೊಲೀಸರನ್ನು ವಿಚಾರಣೆ ವೇಳೆ ಪ್ರಶ್ನಿಸಿತು. ಈ ಬಗ್ಗೆಯೂ ತನಿಖೆ ನಡೆಸುವುದಾಗಿ ಪೊಲೀಸ್ ಪರ ವಕೀಲರು ತಿಳಿಸಿದ್ದು, ಬಾಲಕಿಯ ಸ್ಥಿತಿ ಇನ್ನೂ ಚಿಂತಾಜನಕವಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ಬಲಿಪಶುವಿನ ಗುರುತನ್ನು ರಕ್ಷಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ನ್ಯಾಯಾಲಯವು ಪೊಲೀಸರನ್ನು ಕೇಳಿದೆ. ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಕೂಡ ಈ ವಿಚಾರವನ್ನು ಗಮನಕ್ಕೆ ತಂದಿದೆ ಮತ್ತು ನಿಯಮಗಳ ಅನುಸರಣೆಯಲ್ಲಿ ಕೆಲವು ವೈಪರಿತ್ಯಗಳಿವೆ ಆದ್ದರಿಂದ ಪ್ರಕರಣದಲ್ಲಿ ಉತ್ತರವನ್ನು ಸಲ್ಲಿಸುವುದಾಗಿ ಹೇಳಿದೆ.