ಆಳ್ವಾಸ್ ನುಡಿಸಿರಿ-08: ನಿಮ್ಮ ವೆಬ್‌ದುನಿಯಾದಲ್ಲಿ

ಶುಕ್ರವಾರ, 21 ನವೆಂಬರ್ 2008 (18:19 IST)
WD
ಕನ್ನಡ ಮಣ್ಣಿನಲ್ಲಿ ಹಾಸುಹೊಕ್ಕಾಗಿರುವ ಜನಪದೀಯ ಸಂಸ್ಕೃತಿ, ಸಂಗೀತ, ಸಾಹಿತ್ಯಕ್ಕೆ ಸಹೃದಯರಿಂದ ಯಾವ ಪರಿಯಾಗಿ ಮನ್ನಣೆ ದೊರೆಯುತ್ತದೆ ಮತ್ತು ಯಾವೆಲ್ಲಾ ಮಾದರಿಯಲ್ಲಿ ಈ ಕಲೆಗಳನ್ನು ಪೋಷಿಸಬಹುದು ಎಂಬುದಕ್ಕೆ ಉದಾಹರಣೆಯಾಗಿ ನಿಲ್ಲುತ್ತದೆ ಮೂಡುಬಿದಿರೆಯ ಜನಪ್ರಿಯ ಸಂಘಟಕ, ವೈದ್ಯ, ಸಾಹಿತ್ಯ-ಸಂಸ್ಕೃತಿ ಅಭಿಮಾನಿ ಡಾ.ಮೋಹನ್ ಆಳ್ವಾ ಅವರ ನೇತೃತ್ವದಲ್ಲಿ ನಡೆಯುವ 'ಆಳ್ವಾಸ್ ನುಡಿಸಿರಿ' ಎಂಬ ಅಕ್ಷರದ ಅಕ್ಕರೆಯ ಜಾತ್ರೆ.

ಬಸದಿಗಳ ಬೀಡು, ಜೈನಕಾಶಿ ಎಂದೇ ಜನಜನಿತ ಮೂಡುಬಿದಿರೆಯಲ್ಲಿ ನವೆಂಬರ್ 28, 29 ಮತ್ತು ಮೂರು ದಿನಗಳ ಸಾದ್ಯಂತವಾಗಿ ನಡೆಯಲಿದೆ ನುಡಿಸಿರಿ ಎಂಬ ಪರ್ಯಾಯ ಸಾಹಿತ್ಯ ಸಮ್ಮೇಳನ. ನಾಲ್ಕು ವರ್ಷಗಳಿಂದ ವರ್ಷ ಯಶಸ್ವಿಯಾಗಿ ನಡೆಯುತ್ತಿರುವ ಇದು ನಾಡಿನೆಲ್ಲೆಡೆಯ ಜನಪದೀಯ ಕಲಾಪ್ರಕಾರಗಳಿಗೆ ಉತ್ತೇಜನ, ಸಾಹಿತ್ಯ-ಸಾಹಿತಿಗಳಿಗೆ ಪ್ರೋತ್ಸಾಹ, ಕನ್ನಡದ ಕೈಂಕರ್ಯದ ಮಹದುತ್ಸಾಹದ ಜ್ವಾಲೆಗೆ ತುಪ್ಪ ಸುರಿಯುವ ಕಾರ್ಯವನ್ನು ಐದನೇ ವರ್ಷವೂ ಮಾಡಹೊರಟಿದೆ.

ಸಮ್ಮೇಳನವೆಂದರೆ ಹೀಗಿರಬೇಕು ಎಂದು ಬಂದುಹೋದವರೆಲ್ಲಾ ಅಭಿಮಾನದಿಂದ ಹೇಳಿಕೊಂಡು ಹೋಗಬಲ್ಲಷ್ಟು ಅಕ್ಕರೆ, ಆತ್ಮೀಯತೆ ಮತ್ತು ಸಡಗರ-ಸಂಭ್ರಮ ತುಂಬಿದ ವಾತಾವರಣವು ದಕ್ಷಿಣ ಕನ್ನಡ ಜಿಲ್ಲೆಯ ನಿಸರ್ಗ ಸಿರಿಯೊಡಲಲ್ಲಿ ಹರಡಿರುತ್ತದೆ. ಅಲ್ಲಿ ನಡೆಯುವ ಪ್ರತಿಯೊಂದು ಕಾರ್ಯಕ್ರಮವೂ ಕನ್ನಡ ಮನಸ್ಸುಗಳನ್ನು ಒಗ್ಗೂಡಿಸುವ, ಕನ್ನಡದ ಬಗ್ಗೆ ಹೆಮ್ಮೆ ಪಡುವ ಮತ್ತು ನಮ್ಮ ನೆಲದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಪ್ರಚುರಪಡಿಸುವ ನಿಟ್ಟಿನಲ್ಲಿ ಮೇಲ್ಮಟ್ಟದಲ್ಲಿ ನಿಲ್ಲುತ್ತದೆ.

ಇಂಥದ್ದೊಂದು ಕಾರ್ಯಕ್ರಮದ ಆಗುಹೋಗುಗಳು, ವರದಿಗಳು, ಸಂಸ್ಕೃತಿಯ ವೈಭವದ ಬುತ್ತಿಯನ್ನು ವೆಬ್‌ದುನಿಯಾ ತಾಣವು ನಮ್ಮ ಓದುಗರಿಗಾಗಿ ಕಟ್ಟಿಕೊಡಲಿದೆ. ಹೀಗಾಗಿ ಮಿಸ್ ಮಾಡ್ಕೋಬೇಡಿ... ನವೆಂಬರ್ 28, 29, 30ರಂದು ವೆಬ್‌ದುನಿಯಾ ನೋಡುತ್ತಿರಿ....

ವೆಬ್ದುನಿಯಾವನ್ನು ಓದಿ