ಕನ್ನಡದ ಬಗ್ಗೆ ತಾತ್ಸಾರ ಬೇಡ

ಗುಣವರ್ಧನ ಶೆಟ್ಟಿ
ಬ್ರಿಟಿಷರ ದಾಸ್ಯದಿಂದ ಮುಕ್ತವಾಗಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ ಬಳಿಕ ಭಾರತದ ರಾಜ್ಯಗಳ ಸ್ಥಾಪನೆಗೆ ಭಾಷೆಗಳನ್ನು ಮಾನದಂಡವಾಗಿ ಬಳಸಲಾಯಿತು. ರಾಜರ ಆಡಳಿತವಿದ್ದ, ಕನ್ನಡಭಾಷಿಕರ ವಿವಿಧ ಪ್ರದೇಶಗಳನ್ನು ತೆಕ್ಕೆಗೆ ತೆಗೆದುಕೊಂಡು ಮೈಸೂರು ರಾಜ್ಯವನ್ನು ರಚಿಸಲಾಯಿತು. ಉತ್ತರ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕ ಜಿಲ್ಲೆಗಳು ನೂತನ ರಾಜ್ಯದಲ್ಲಿ ವಿಲೀನವಾಯಿತು. ಉತ್ತರ ಕರ್ನಾಟಕ ಮತ್ತು ಹೈದರಾಬಾದ್ ಪ್ರದೇಶದ ಜನರು ರಾಜ್ಯಕ್ಕೆ ಮೈಸೂರಿನ ನಾಮಕರಣವನ್ನು ಇಷ್ಟಪಡಲಿಲ್ಲ. ಈ ಹೆಸರಲ್ಲಿ ಬದಲಾವಣೆ ಮಾಡಬೇಕೆಂದು ಒತ್ತಾಯಿಸುತ್ತಿದ್ದರು. ಸುದೀರ್ಘ ಚರ್ಚೆಯ ಬಳಿಕ 1973ರ ನವೆಂಬರ್ 1ರಂದು ರಾಜ್ಯಕ್ಕೆ ಕರ್ನಾಟಕವೆಂದು ಪುನರ್ ನಾಮಕರಣ ಮಾಡಲಾಯಿತು. ಆಗಿನ ಮುಖ್ಯಮಂತ್ರಿಯಾಗಿದ್ದ ದೇವರಾಜ್ ಅರಸು ಈ ಮಹತ್ವದ ನಿರ್ಧಾರವನ್ನು ಕೈಗೊಂಡರು.

NRB
ಅಧಿಕೃತವಾಗಿ ನ.1ರಂದು ನೂತನ ರಾಜ್ಯದ ಜನನವಾಯಿತು. ಆದಿನವೇ ರಾಜ್ಯದ ಜನ್ಮದಿನವನ್ನು ಆಚರಿಸಲಾಗುತ್ತಿದ್ದು, ಇದು ಕನ್ನಡ ರಾಜ್ಯೋತ್ಸವ ಅಥವಾ ಕರ್ನಾಟಕ ರಾಜ್ಯೋತ್ಸವ ಎಂದು ಜನಪ್ರಿಯವಾಗಿದೆ.

ರಾಜ್ಯಕ್ಕೆ ನೂತನ ನಾಮಕರಣ ಎಲ್ಲೆಲ್ಲೂ ಸಂಭ್ರಮದ ವಾತಾವರಣ ಮ‌ೂಡಿಸಿತು. ಕನ್ನಡ ಮತ್ತು ಕರ್ನಾಟಕದ ಹೆಸರು ಏಕತೆಯ ಪ್ರಜ್ಞೆಯನ್ನು ಜನರಲ್ಲಿ ಮ‌ೂಡಿಸಿತು. ಆದರೆ ಕೆಲವು ವರ್ಷಗಳಿಂದೀಚೆಗೆ ಕರ್ನಾಟಕದ ಬಗ್ಗೆ ಜನತೆ ಕಂಡ ಕನಸು, ಕನ್ನಡದ ಉಸಿರು ಬತ್ತಿಹೋದ ಭಾವನೆ ಮ‌ೂಡುತ್ತಿದೆ. ತಾಯ್ನುಡಿ ಕನ್ನಡ ಸ್ವರಾಜ್ಯದಲ್ಲೇ ಪರಕೀಯವಾದ ಭಾವನೆ ಮ‌ೂಡಿಸುತ್ತಿದೆ. ಇಂದು ಕರ್ನಾಟಕದಲ್ಲಿ ಕನ್ನಡಕ್ಕೆ ಎಷ್ಟರಮಟ್ಟಿಗೆ ಸ್ಥಾನಮಾನವಿದೆ ಎಂದು ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳಬೇಕಾದ ಕಾಲಘಟ್ಟದಲ್ಲಿದ್ದೇವೆ. ಕರ್ನಾಟಕದಲ್ಲಿ ಕನ್ನಡಿಗರೇ ನಿರುದ್ಯೋಗಿಗಳಾಗಿ ಉದ್ಯೋಗಗಳೆಲ್ಲವೂ ಪರಭಾಷಿಗರ ಪಾಲಾಗುತ್ತಿದೆ. ಕನ್ನಡ ಕಲಿತದ್ದೇ ನಮ್ಮ ತಪ್ಪೇ ಎನ್ನುವ ಭಾವನೆ ವಿದ್ಯಾರ್ಥಿಗಳಲ್ಲಿ ಮ‌ೂಡುತ್ತಿದೆ. ಕನ್ನಡಿಗರ ಇಂತಹ ದೈನೇಸಿ ಸ್ಥಿತಿಗೆ ಕಾರಣವೇನಿರಬಹುದು? ಕನ್ನಡದಲ್ಲಿ ಓದಿದವರು, ಕನ್ನಡ ಕಲಿತವರಿಗೆ ಕರ್ನಾಟಕ ಸರ್ಕಾರ ಕೆಲಸ ಕೊಡಬೇಕೇ ಹೊರತು ಬೇರೆ ರಾಜ್ಯಗಳು ಕೊಡುತ್ತವೆಯೇ? ಆದರೆ ಸರ್ಕಾರಿ ಕೆಲಸವೆನ್ನುವುದು ಕನ್ನಡಿಗರಿಗೆ ಮರೀಚಿಕೆಯಾಗಿದ್ದು, ಕೈಗೆಟುಕದ ಸೊತ್ತಾಗಿದೆ.

ಕನ್ನಡಿಗರು ಸರ್ಕಾರಿ ಉದ್ಯೋಗ ದಕ್ಕಿಸಿಕೊಳ್ಳಲು ಹತ್ತಾರು ವರ್ಷ ಕಾಯುತ್ತಾ ಕುಳಿತರೆ, ಇಂಗ್ಲೀಷ್ ಕಲಿತಿರುವ ಪರಭಾಷಿಕರಿಗೆ ನಮ್ಮ ರಾಜ್ಯದಲ್ಲಿನ ಐಟಿ, ಬಿಟಿ, ಹೊರಗುತ್ತಿಗೆ ಮುಂತಾದ ಖಾಸಗಿ ಉದ್ಯೋಗಗಳು ಸುಲಭವಾಗಿ ದಕ್ಕುತ್ತಿವೆ. ಎಲ್ಲೋ ಬೆರಳಿಣಿಕೆಯಷ್ಟು ಕನ್ನಡಿಗರು ಇಂಗ್ಲೀಷ್ ಮಾಧ್ಯಮದ ಶಾಲೆಗಳಲ್ಲಿ ಕಲಿತು ಪರಭಾಷಿಕರಿಗೆ ಪೈಪೋಟಿ ಒಡ್ಡುತ್ತಿದ್ದರೆ ಕನ್ನಡ ಕಲಿತ ಕನ್ನಡಿಗರು ಉದ್ಯೋಗ ಸಿಗದೇ ಪರಿತಪಿಸುವಂತಾಗಿದೆ.

ಇತ್ತೀಚೆಗೆ ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪೊಂದನ್ನು ನೀಡಿ, ಪ್ರಾಥಮಿಕ ಶಾಲೆಗಳಲ್ಲಿ ಕನ್ನಡ ಮಾಧ್ಯಮ ಕಡ್ಡಾಯವೆಂದು ಸರ್ಕಾರ ನೀಡಿದ್ದ ಆದೇಶವನ್ನು ರದ್ದುಮಾಡಿತು.

ಇಂಗ್ಲೀಷ್ ಇಲ್ಲದಿದ್ದರೆ ವಿವಿಧ ರಾಜ್ಯಗಳಲ್ಲಿ ಸಂವಹನ ಕಷ್ಟ. ಬಹುಭಾಷಾ ರಾಷ್ಟ್ರದಲ್ಲಿ ಇಂಗ್ಲೀಷ್ ಸಂಪರ್ಕ ಭಾಷೆಯಾಗಿರುವುದರಿಂದ ಯಾವ ಮಾಧ್ಯಮದಲ್ಲಿ ಶಿಕ್ಷಣ ನೀಡಬೇಕೆಂಬುದನ್ನು ಪೋಷಕರು ಮತ್ತು ಮಕ್ಕಳ ನಿರ್ಧಾರಕ್ಕೆ ಸರ್ಕಾರ ಬಿಡಬೇಕು ಎಂದು ಕೋರ್ಟ್ ತೀರ್ಪಿನಲ್ಲಿ ತಿಳಿಸಿತು. ಕೋರ್ಟ್ ತೀರ್ಪು ನ್ಯಾಯಯುತವಾಗೇ ಇದೆ. ಆದರೆ ಎಲ್ಲರೂ ತಮ್ಮ ಮಕ್ಕಳ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಇಂಗ್ಲೀಷ್ ಮೀಡಿಯಂ ಶಾಲೆಗಳಲ್ಲಿ ಶಿಕ್ಷಣ ಕೊಟ್ಟರೆ ಕನ್ನಡದ ಗತಿಯೇನು ಎನ್ನುವುದೇ ಈಗ ಭೂತಾಕಾರದ ಪ್ರಶ್ನೆಯಾಗಿ ಉಳಿದಿದೆ.

ಇನ್ನು ಹತ್ತಾರು ವರ್ಷಗಳಲ್ಲಿ ಕನ್ನಡ ಕಲಿಯುವವರೇ ಇಲ್ಲದೇ ಕನ್ನಡವು ಇತಿಹಾಸಪುಟಗಳಲ್ಲಿ ಸೇರಿಹೋಗುತ್ತದೆಯೇ? ಕನ್ನಡವೆಲ್ಲಿದೆ ಎಂದು ದುರ್ಬೀನಿನಲ್ಲಿ ಹುಡುಕುವ ಪರಿಸ್ಥಿತಿ ಬರುವುದೇ? ಆಗ ಕನ್ನಡ ರಾಜ್ಯೋತ್ಸವ, ಕರ್ನಾಟಕ ರಾಜ್ಯ ಎನ್ನುವುದಕ್ಕೆ ಅರ್ಥವಿರುತ್ತದೆಯೇ? ಹೀಗಾಗದಿರಲು ಸರ್ಕಾರ ಏನು ಮಾಡಬೇಕು? ಕನ್ನಡಿಗರಿಗೆ ಸರ್ಕಾರಿ ಉದ್ಯೋಗಗಳಲ್ಲಿ ಅಗ್ರಪ್ರಾಶಸ್ತ್ಯ ನೀಡುವುದು, ಖಾಸಗಿ ಉದ್ಯೋಗಗಳಲ್ಲಿ ಸ್ವಲ್ಪ ಭಾಗವಾದರೂ ಕನ್ನಡಿಗರಿಗೆ ಮೀಸಲಿಡುವಂತೆ ಸರ್ಕಾರದ ಆದೇಶ ಕಡ್ಡಾಯವಾಗಿ ಜಾರಿಗೆ ತರುವ ಮ‌ೂಲಕ ಕನ್ನಡಿಗರ ಹಿತರಕ್ಷಣೆ ಮಾಡುವ ಕೈಂಕರ್ಯವನ್ನು ಸರ್ಕಾರ ತೊಡಬೇಕು. ಖಾಸಗಿ ಉದ್ಯಮಗಳಲ್ಲೂ ಕನ್ನಡವನ್ನು ಸಂಪರ್ಕ ಭಾಷೆಯಾಗಿ ಬಳಸಲು ಆದಷ್ಟು ಒತ್ತಡ ಹೇರುವ ಮ‌ೂಲಕ ಕನ್ನಡವನ್ನು ಉಳಿಸಿ, ಬೆಳೆಸಲು ಸರ್ಕಾರ ಯತ್ನಿಸಬೇಕಾಗಿದೆ.

ನವೆಂಬರ್ 1 ಬಂತೆಂದರೆ ಕರ್ನಾಟಕದಲ್ಲಿ ಸಂಭ್ರಮದ ವಾತಾವರಣ. ಅಂದು ಸರ್ಕಾರಿ ಕಚೇರಿಗಳಿಗೆ ರಜೆ. ಕನ್ನಡ ಸಂಘಟನೆಗಳು ಕನ್ನಡ ಮಂತ್ರವನ್ನು ಪಠಿಸುತ್ತವೆ. ಎಲ್ಲೆಲ್ಲೂ ಕನ್ನಡ ನಾಟಕಗಳು, ಸಮಾರಂಭಗಳು ನಡೆಯುತ್ತವೆ. ಆದರೆ ವರ್ಷಕ್ಕೊಮ್ಮೆ ರಾಜ್ಯೋತ್ಸವ ಆಚರಿಸಿ ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸುವ ಬಗ್ಗೆ ಭಾಷಣ ಬಿಗಿದು, ನಾಟಕ, ಸಮಾರಂಭಗಳನ್ನು ಏರ್ಪಡಿಸಿ ಸಂಭ್ರಮದಲ್ಲಿ ಮುಳುಗುವ ನಾವು ಬಳಿಕ ಕನ್ನಡವನ್ನು ಮರೆತೇ ಬಿಡುತ್ತೇವೆ.

ಕರ್ನಾಟಕದ ರಾಜಧಾನಿ ಬೆಂಗಳೂರಿಗೆ ಹೊರರಾಜ್ಯದವರು ಪ್ರವೇಶಿಸಿದರೆ ಇದು ಕರ್ನಾಟಕದ ರಾಜಧಾನಿಯೇ ಎನ್ನುವ ಅನುಮಾನ ಅವರಿಗೆ ಮ‌ೂಡಬಹುದು.

ಬೆಂಗಳೂರು ಬಹುಭಾಷಾಪಂಡಿತರ ಬೀಡಾಗಿರುವುದು ಪರಭಾಷಿಕರಿಗೆ ಸಂವಹನ, ವ್ಯವಹಾರ ಸುಲಭವೆನಿಸುತ್ತಿದೆ. ತಮ್ಮ ಮಾತೃಭಾಷೆಯಲ್ಲೇ ವ್ಯವಹರಿಸುತ್ತಾ, ಕನ್ನಡಕಲಿಯುವ ಗೋಜಿಗೇ ಹೋಗದ ಪರಭಾಷಿಕರೂ ಇದ್ದಾರೆ. ತೆಲುಗು ಭಾಷಿಕರೊಂದಿಗೆ ತೆಲುಗಿನಲ್ಲಿ, ತಮಿಳುಭಾಷಿಕರೊಂದಿಗೆ ತಮಿಳಿನಲ್ಲಿ, ಹಿಂದಿ ಭಾಷಿಕರೊಂದಿಗೆ ಹಿಂದಿಯಲ್ಲಿ ಸಂಭಾಷಿಸುತ್ತಾ, ಕಡೆಗೆ ಮನೆಯಲ್ಲಿ ಮಕ್ಕಳೊಂದಿಗೆ ಇಂಗ್ಲೀಷ್ ಮಾತನಾಡುತ್ತಾ ಕನ್ನಡವನ್ನು ಮ‌ೂಲೆಗುಂಪು ಮಾಡುವ ಕನ್ನಡಿಗರೂ ನಮ್ಮಲ್ಲಿದ್ದಾರೆ.

ಇಂಗ್ಲೀಷ್ ಮಾಧ್ಯಮದ ಶಾಲೆಗಳಲ್ಲಿ ಓದುವ ಕನ್ನಡಿಗ ಮಕ್ಕಳನ್ನು ನೀವು ಮಾತನಾಡಿಸಿ ನೋಡಿ, ಅವರು ಕನ್ನಡಮಾತನಾಡಲು ತಡವರಿಸುವುದು ಕಂಡುಬರುತ್ತದೆ. ಶಾಲೆಗಳಲ್ಲಿ ಕನ್ನಡಮಾತನಾಡಿದರೆ ದಂಡವಿಧಿಸುವುದು ಬೇರೆ ವಿಚಾರ. ಆದರೆ ತಂದೆತಾಯಿಯರು ಕೂಡ ಕನ್ನಡದಲ್ಲಿ ಮಾತನಾಡುವುದನ್ನು ಮನೆಯಲ್ಲಿ ಸರಿಯಾಗಿ ಕಲಿಸುವುದಿಲ್ಲ. ಮಮ್ಮಿ, ಡ್ಯಾಡಿ ಸಂಸ್ಕೃತಿಯನ್ನೇ ಮಕ್ಕಳಲ್ಲಿ ರೂಢಿಸುವ ಹಿರಿಯರು ಮಕ್ಕಳೊಂದಿಗೆ ಇಂಗ್ಲಿಷ್‌ನಲ್ಲಿ ಮಾತನಾಡುತ್ತಾ ಕನ್ನಡ ಭಾಷೆಗೆ ಕೊಡಲಿಪೆಟ್ಟು ಹಾಕುತ್ತಾರೆ. ಕನ್ನಡ ಮಾತನಾಡಿದರೆ ತಮ್ಮ ಗೌರವಕ್ಕೆ ಕುಂದು ಎನ್ನುವ ಭಾವನೆ ಕೆಲವು ಪ್ರತಿಷ್ಠಿತ ವರ್ಗದ ಕನ್ನಡಿಗರಲ್ಲಿ ಇರುತ್ತದೆ.

ಕನ್ನಡ ಎಂದರೆ ಎನ್ನಡ ಎನ್ನುವ ಪರಭಾಷಿಕರು ಕನ್ನಡ ಕಲಿಯಲೇಬೇಕಾದ ಅನಿವಾರ್ಯ ಸ್ಥಿತಿಯನ್ನು ಸರ್ಕಾರ ಮತ್ತು ಜನತೆ ನಿರ್ಮಿಸಬೇಕಾಗಿದೆ. ಕನ್ನಡದ ಬಗ್ಗೆ ತಾತ್ಸಾರ ಮನೋಭಾವ ತಾಳದೇ ಕನ್ನಡವೇ ನನ್ನುಸಿರು ಎನ್ನುವ ಭಾವನೆ ಕನ್ನಡಿಗರಲ್ಲಿ ಮ‌ೂಡಬೇಕು. ಹೀಗಾದಾಗ ಮಾತ್ರ ರಾಜ್ಯೋತ್ಸವ, ಕನ್ನಡ ಉತ್ಸವಗಳು ಅರ್ಥಪೂರ್ಣವೆನಿಸುತ್ತವೆ.