ಗಟ್ಟಿ ಅವಲಕ್ಕಿಯನ್ನು ಮಿಕ್ಸರ್‌ನ ಡ್ರೈ ಜಾರ್‌ಗೆ ಹಾಕಿ ಕೇವಲ 2-3 ಸೆಕೆಂಡ್ ಗಳ ಕಾಲ ತಿರುಗಿಸಿ. ಅವಲಕ್ಕಿಯು ಸ್ವಲ್ಪ ತರಿತರಿಯಾಗಿರಲಿ. ಪೂರ್ತಿ ನುಣ್ಣಗಾಗಬಾರದು. ಹುಣಸೆ ಹಣ್ಣಿಗೆ 1 ಲೋಟದಷ್ಟು ಬಿಸಿ ನೀರು ಹಾಕಿಟ್ಟು ಸ್ವಲ್ಪ ಹೊತ್ತಿನ ನಂತರ ಕೈಯಲ್ಲಿ ಕಿವುಚಿ ಅದರ ರಸವನ್ನು ತೆಗೆದಿಟ್ಟುಕೊಳ್ಳಿ. ಬೆಲ್ಲವನ್ನು ಪುಡಿ ಮಾಡಿಕೊಳ್ಳಿ. ಹುಣಸೆಹಣ್ಣಿನ ರಸಕ್ಕೆ ಬೆಲ್ಲದ ಪುಡಿಯನ್ನು, ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿಡಿ. ಬೆಲ್ಲವು ಕರಗಲಿ.
ಈಗ ಪುಡಿ ಮಾಡಿಕೊಂಡ ಅವಲಕ್ಕಿಯನ್ನು ಎರಡು ಮೂರು ಬಾರಿ ತೊಳೆದು ಚೆನ್ನಾಗಿ ಹಿಂಡಿ ಒಂದು ಬೇಸಿನ್ ಗೆ ಹಾಕಿ. ಈ ಅವಲಕ್ಕಿಗೆ ಮೊದಲೆ ಮಾಡಿಟ್ಟ ಹುಳಿ-ಬೆಲ್ಲ-ಉಪ್ಪಿನ ಮಿಶ್ರಣದ ರಸವನ್ನು ಹಾಕಿ ಕಲಸಿಟ್ಟು ಸುಮಾರು 20-30 ನಿಮಿಷ ಹಾಗೇ ಇಡಿ. ಅವಲಕ್ಕಿಯು ಹುಳಿ-ಬೆಲ್ಲದ ನೀರನ್ನು ಹೀರಿಕೊಂಡು ಗಟ್ಟಿಯಾಗಲಿ. ಬ್ಯಾಡಗಿ ಮೆಣಸಿನ ಕಾಯಿ, ತೆಂಗಿನ ತುರಿ, ಕಾಲು ಚಮಚ ಸಾಸಿವೆಕಾಳನ್ನು ಮಿಕ್ಸರ್ ಗೆ ಹಾಕಿಕೊಂಡು ರುಬ್ಬಿಕೊಳ್ಳಿ. (ನೀರು ಸೇರಿಸಬಾರದು).
ಅರ್ಧ ಗಂಟೆಯ ನಂತರ, ಸ್ಟವ್ ಹೊತ್ತಿಸಿ, ಫ್ರೈಯಿಂಗ್ ಪ್ಯಾನ್ ಇಟ್ಟು, ಎಣ್ಣೆ ಹಾಕಿ. ಕಾದಾಗ ಕಡಲೆಕಾಯಿ ಬೀಜ, ಸಾಸಿವೆ ಕಾಳು ಹಾಕಿ. ಸಿಡಿದಾಗ ಹೆಚ್ಚಿಟ್ಟ ಕರಿಬೇವಿನ ಸೊಪ್ಪು ಹಾಕಿ, ರುಬ್ಬಿದ ಮಸಾಲೆ ಮತ್ತು ಅರಿಶಿನವನ್ನು ಹಾಕಿ ಹುರಿಯಿರಿ. ಮಸಾಲೆಯನ್ನು ಹುರಿದ ನಂತರ, ಹುಳಿರಸದಲ್ಲಿ ನೆನೆಸಿಟ್ಟ ಅವಲಕ್ಕಿಯನ್ನು ಹಾಕಿ ಚೆನ್ನಾಗಿ ಕೈ ಮಗುಚಿ ಮುಚ್ಚಳವನ್ನು ಮುಚ್ಚಿಡಿ.