ಸುಡು ಬೇಸಿಗೆಗೆ ನಾವು ಮರೆಯದೇ ಸೇವಿಸಬೇಕಾಗಿರುವ ಆಹಾರಗಳಿವು

ಸೋಮವಾರ, 18 ಮಾರ್ಚ್ 2019 (16:03 IST)
ಬೇಸಿಗೆಯ ಕಾಲ ಬಂತೆಂದರೆ ಆಯ್ಯೋ ಎಷ್ಚು ಉರಿಯಪ್ಪಾ, ಅಮ್ಮಾ ಸೆಖೆ ಎಂಬಂತಹ ಉದ್ಗಾರಗಳು ಸರ್ವೇ ಸಾಮಾನ್ಯ. ಬೇಸಿಗೆಯ ಕಾಲದಲ್ಲಿ ಬಾವಿ, ಕೆರೆಯ ನೀರುಗಳು ಬತ್ತುವುದಲ್ಲದೇ ಮಾನವನ ದೇಹದಲ್ಲಿಯೂ ನಿರ್ಜಲೀಕರಣ ಉಂಟಾಗುತ್ತದೆ. ಅಷ್ಟೇ ಅಲ್ಲದೇ ತ್ವಚೆಯ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ.

ಪ್ರಾಣಿ-ಪಕ್ಷಿಗಳೂ ತತ್ತರಿಸುವಂತಹ ಈ ಬೇಸಿಗೆ ಕಾಲದಲ್ಲಿ ಎಂತಹ ಆಹಾರಗಳನ್ನು ನಾವು ಸೇವಿಸಬೇಕು ಎಂಬಂತಹ ಪ್ರಶ್ನೆ ಉದ್ಭವಿಸುವುದು ಸಹಜ. ಏಕೆಂದರೆ ಜೀರ್ಣಶಕ್ತಿಯೂ ಕಡಿಮೆಯಾಗಿರುತ್ತದೆ. ಎಂತಹ ಆಹಾರಗಳನ್ನು ಸೇವಿಸಬೇಕು ಎಂಬುದನ್ನು ನೋಡೋಣ..
 
  * ಮಜ್ಜಿಗೆ:
    ಮೊಸರು ಅಥವಾ ಮಜ್ಜಿಗೆ ದೇಹವನ್ನು ತಂಪಾಗಿಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅದನ್ನು ಯಾವ ಸಮಯದಲ್ಲಾದರೂ ನಾವು ಸೇವಿಸಬಹುದು. ಆದರೆ ಉರಿ ಬಿಸಿಲಿನಲ್ಲಿ ರಾಸಾಯನಿಕಯುಕ್ತ, ಆಸಿಡ್ ಅಂಶವಿರುವ ಪಾನೀಯಗಳಿಗಿಂತ ಮಜ್ಜಿಗೆಯ ಸೇವನೆ ದೇಹದ ಆರೋಗ್ಯಕ್ಕೆ ಬಹು ಉಪಕಾರಿಯಾಗಿದೆ.
  * ಎಳನೀರು:
    ಕಲ್ಪವೃಕ್ಷವೆಂದೇ ಕರೆಯಲ್ಪಡುವ ನಾರಿಕೇಳದ ನೀರು ಅರ್ಥಾತ್ ಎಳನೀರು ದೇಹದ ಆರೋಗ್ಯವನ್ನು ಸಮತೋಲನದಲ್ಲಿರಿಸುತ್ತದೆ. ಅದರಲ್ಲಿಯೂ ಬೇಸಿಗೆಯ ಸಮಯದಲ್ಲಿ ತಪ್ಪದೇ ಎಳನೀರಿನ ಸೇವನೆಯು ದೇಹವನ್ನು ನಿರ್ಜಲೀಕರಣಗೊಳ್ಳುವುದನ್ನು ತಪ್ಪಿಸುತ್ತದೆ. ನೀರಿನಾಂಶವನ್ನು ಕಾಪಾಡಿಕೊಳ್ಳುತ್ತದೆ. ಅಷ್ಟೇ ಅಲ್ಲದೇ ಎಳನೀರಿನಲ್ಲಿರುವ ಪೋಷಕಾಂಶಗಳು ಸುಸ್ತನ್ನು ಕಡಿಮೆ ಮಾಡುತ್ತದೆ.
  * ನಿಂಬೆ: 
  ಬೇಸಿಗೆ ಕಾಲದಲ್ಲಿ ಬಹು ಉಪಯೋಗಿ ನಿಂಬು ಎಂದು ಹೇಳಬಹುದು. ಈ ಹಣ್ಣನ್ನು ವಿವಿಧ ರೀತಿಯಲ್ಲಿ ಸೇವಿಸಬಹುದು. ಮತ್ತು ಇದು ದೇಹಕ್ಕೆ ತಂಪನ್ನೂ ಸಹ ನೀಡುತ್ತದೆ. ವಿಟಾಮಿನ್ ಸಿ ಯ ಆಗರವಾಗಿರುವ ಈ ಹಣ್ಣು ದೇಹದ ನಿರ್ಜಲೀಕರಣವನ್ನು ತಪ್ಪಿಸುವಲ್ಲಿ ಬಹು ಮುಖ್ಯಪಾತ್ರವನ್ನು ವಹಿಸುತ್ತದೆ.
 
  * ಕಲ್ಲಂಗಡಿ ಹಣ್ಣು:
  ಬೇಸಿಗೆಯಲ್ಲಿ ಅತಿ ಹೆಚ್ಚು ಬಳಕೆಯಾಗುವ ಆಹಾರ ಪದಾರ್ಥಗಳಲ್ಲಿ ಕಲ್ಲಂಗಡಿಯೂ ಒಂದು. ಹಲವಾರು ಪೋಷಕಾಂಶಗಳಿಂದ ಕೂಡಿರುವಂತಹ ಕಲ್ಲಂಗಡಿ ಹಣ್ಣು ನೈಸರ್ಗಿಕವಾಗಿ ದೇಹದ ಕಲ್ಮಶವನ್ನು ಹೊರ ಹಾಕಿ ಎಲ್ಲಾ ಅಂಗಾಂಗಗಳು ಸರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡುತ್ತದೆ. ಈ ಹಣ್ಣು ದೇಹವನ್ನು ತೇವಾಂಶದಿಂದ ಇಡುವಲ್ಲಿ ಸಹಾಯ ಮಾಡುತ್ತದೆ.
 
  * ಮುಳ್ಳುಸೌತೆ:
 ಬೇಸಿಗೆ ಕಾಲದಲ್ಲಿ ಸಾಮಾನ್ಯವಾಗಿ ಕಾಡುವ ಸಮಸ್ಯೆಯೆಂದರೆ ಮಲಬದ್ದತೆ, ಮುಳ್ಳುಸೌತೆಯಲ್ಲಿರುವ ನಾರಿನಾಂಶವು ಮಲಬದ್ದತೆಯನ್ನು ದೂರವಿಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಅಷ್ಟೇ ಅಲ್ಲದೇ ಇದರಲ್ಲಿ ನೀರಿನಂಶ ಅತಿ ಹೆಚ್ಚಿದ್ದು, ಕ್ಯಾಲೋರಿಯು ಅತಿ ಕಡಿಮೆ ಇದೆ. ಮತ್ತು ಅನೇಕ ಪೋಷಕಾಂಶಗಳಿಂದ ಸಮೃದ್ದವಾಗಿದೆ. 
 
  * ಸೋಡಾ ರಹಿತ ಜ್ಯೂಸ್:
 ತಂಪಾದ ಪಾನೀಯಗಳನ್ನು ಬೇಸಿಗೆ ಕಾಲದಲ್ಲಿ ಸೇವಿಸುವುದು ಹಿತಕಾರಿಯೇ ಆದರೆ ಸೋಡಾದಿಂದ ಆದಷ್ಟು ದೂರವಿರುವುದು ಉತ್ತಮ.
  
 ಕಾಲ ಯಾವುದೇ ಇರಲಿ ಪೌಷ್ಟಿಕಾಂಶವಿರುವ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ಉತ್ತಮವಾದ ಆರೋಗ್ಯವನ್ನು ಪಡೆದುಕೊಳ್ಳಬಹುದು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಬಿಸಿಲಿನ ಪ್ರಖರತೆಯಿಂದಾಗಿ ತ್ವಚೆಯ ಮೇಲೆ ಅಷ್ಟೇ ಅಲ್ಲದೇ ಆರೋಗ್ಯದ ಮೇಲೂ ಪ್ರಭಾವ ಬೀರುವುದರಿಂದ ವಿಸೇಷವಾಗಿ ಬೇಸಿಗೆ ಕಾಲ ಪ್ರಾರಂಭವಾದಾಗಲೇ ಮುತುವರ್ಜಿ ವಹಿಸುವುದು ಒಳ್ಳೆಯದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ