ಕೆಸುವಿನ ಸೊಪ್ಪಿನ ಚಟ್ನಿ ಮಾಡಿ ನೋಡಿ..

ನಾಗಶ್ರೀ ಭಟ್

ಮಂಗಳವಾರ, 13 ಫೆಬ್ರವರಿ 2018 (16:12 IST)
ಕೆಸುವಿನ ಎಲೆಗಳು ವರ್ಷದ ಎಲ್ಲಾ ದಿನಗಳಲ್ಲೂ ಲಭ್ಯವಿದೆಯಾದರೂ ಮಳೆಗಾಲದ ದಿನಗಳಲ್ಲಿ ಹೆಚ್ಚಾಗಿ ದೊರೆಯುತ್ತದೆ. ಇದು ದೇಹದ ಉಷ್ಣಾಂಶವನ್ನು ಹೆಚ್ಚಿಸುವ ಗುಣವನ್ನು ಹೊಂದಿರುವ ಕಾರಣ ಮಳೆಗಾಲದಲ್ಲಿಯೇ ಹೆಚ್ಚಾಗಿ ಬಳಸುತ್ತಾರೆ.

ಪ್ರಪಂಚದಾದ್ಯಂತ ಕೆಸುವಿನ ಎಲೆಗಳಲ್ಲಿ ಹಲವಾರು ವೈವಿಧ್ಯಗಳಿದ್ದು ಭಾರತದ ಹಲವು ಭಾಗಗಳಲ್ಲಿ ಇದನ್ನು ಅಡುಗೆಯಲ್ಲಿ ಬಳಸುತ್ತಾರೆ. ಕೆಸುವಿನ ಎಲೆಯಲ್ಲಿ ಕ್ಯಾಲ್ಶಿಯಂ ಆಕ್ಸಲೇಟ್ ಇದ್ದು ಎಲೆಗಳು ಸರಿಯಾಗಿ ಬೇಯದಿದ್ದರೆ ಅಥವಾ ಸರಿಯಾದ ಪ್ರಮಾಣದ ಹುಣಿಸೆ ಹಣ್ಣನ್ನು ಬಳಸದಿದ್ದರೆ ಇದು ತುರಿಕೆಗೆ ಕಾರಣವಾಗುತ್ತದೆ. ರುಚಿಯಾದ ಕೆಸುವಿನ ಸೊಪ್ಪಿನ ಚಟ್ನಿಯನ್ನು ಸರಳವಾಗಿ ಮಾಡುವ ಸರಿಯಾದ ವಿಧಾನವನ್ನು ತಿಳಿದುಕೊಳ್ಳಬೇಕಾದರೆ ಈ ಲೇಖನವನ್ನು ಓದಿ.
 
ಬೇಕಾಗುವ ಸಾಮಗ್ರಿಗಳು:
 
ಕೆಸುವಿನ ಎಲೆ - 5-6
ಕಾಯಿತುರಿ - 1 ಕಪ್
ಉದ್ದಿನಬೇಳೆ - 2 ಚಮಚ
ಕಡಲೆ ಬೇಳೆ - 1 ಚಮಚ
ಒಣಮೆಣಸು - 5-6
ಹುಣಿಸೆ ಹಣ್ಣು - 1 ನಿಂಬೆ ಗಾತ್ರ
ಅರಿಶಿಣ - 1/2 ಚಮಚ
ಉಪ್ಪು - ರುಚಿಗೆ
ಸಾಸಿವೆ - 1 ಚಮಚ
ಕರಿಬೇವು - ಸ್ವಲ್ಪ
ಶುಂಠಿ - 8-10 ಎಸಳು
ಎಣ್ಣೆ - 4-5 ಚಮಚ
 
ಮಾಡುವ ವಿಧಾನ:
 
* ಕೆಸುವಿನ ಎಲೆಗಳನ್ನು ಚೆನ್ನಾಗಿ ತೊಳೆದುಕೊಳ್ಳಿ. ಕೈಗಳಿಗೆ ಕೊಬ್ಬರಿ ಎಣ್ಣೆಯನ್ನು ಹಚ್ಚಿಕೊಂಡು ಎಲೆಗಳ ಹಿಂದಿನ ಗಟ್ಟಿಯಾದ ನಾರನ್ನು ತೆಗೆಯಿರಿ ಮತ್ತು ಎಲೆಗಳನ್ನು ಹೆಚ್ಚಿಕೊಳ್ಳಿ. (ಕೈಗಳಿಗೆ ಎಣ್ಣೆಯನ್ನು ಹಚ್ಚಿಕೊಂಡರೆ ತುರಿಕೆ ಇರುವುದಿಲ್ಲ)
 
* ನಂತರ ಒಂದು ಪ್ಯಾನ್ ತೆಗೆದುಕೊಂಡು ಅದಕ್ಕೆ ಹೆಚ್ಚಿದ ಕೆಸುವಿನ ಎಲೆಗಳು, ಅರಿಶಿಣ, ಹುಣಿಸೆಹಣ್ಣು, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಒಂದು ಕಪ್ ನೀರನ್ನು ಹಾಕಿ ಚೆನ್ನಾಗಿ ಬೇಯಿಸಿ. ಎಲೆಗಳು ಚೆನ್ನಾಗಿ ಬೆಂದ ನಂತರ ಸ್ಟೌ ಅನ್ನು ಆಫ್ ಮಾಡಿ ಅದು ತಣ್ಣಗಾಗಲು ಬಿಡಿ.
 
* ಒಂದು ಚಿಕ್ಕ ಪ್ಯಾನ್‌ನಲ್ಲಿ 2-3 ಚಮಚ ಎಣ್ಣೆಯನ್ನು ಹಾಕಿ ಅದು ಬಿಸಿಯಾದಾಗ ಉದ್ದಿನಬೇಳೆ, ಕಡಲೆಬೇಳೆ ಮತ್ತು ಒಣಮೆಣಸು ಮತ್ತು ಸ್ವಲ್ಪ ಕರಿಬೇವನ್ನು ಕ್ರಮವಾಗಿ ಹಾಕಿ ಚೆನ್ನಾಗಿ ಹುರಿಯಿರಿ. ಸ್ಟೌ ಆಫ್ ಮಾಡಿದ ನಂತರ ಕಾಯಿತುರಿಯನ್ನು ಅದಕ್ಕೆ ಮಿಕ್ಸ್ ಮಾಡಿ ತಣ್ಣಗಾಗಲು ಬಿಡಿ.
 
* ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದರಲ್ಲಿ ಬೇಯಿಸಿದ ಕೆಸುವಿನ ಎಲೆ ಮತ್ತು ಹುರಿದ ಮಸಾಲೆಯನ್ನು ಹಾಕಿ ರುಬ್ಬಿಕೊಂಡು ಅದನ್ನು ಒಂದು ಬೌಲ್‌‌ನಲ್ಲಿ ಹಾಕಿಕೊಳ್ಳಿ.
 
* ಈಗ ಒಂದು ಚಿಕ್ಕ ಪ್ಯಾನ್ ತೆಗೆದುಕೊಂಡು 4-5 ಚಮಚ ಎಣ್ಣೆಯನ್ನು ಹಾಕಿ ಅದು ಬಿಸಿಯಾದಾಗ ಸಾಸಿವೆ, ಬೆಳ್ಳುಳ್ಳಿ, ಒಂದು ಒಣಮೆಣಸು ಮತ್ತು ಕರಿಬೇವನ್ನು ಕ್ರಮವಾಗಿ ಹಾಕಿ ಹುರಿದು ಒಗ್ಗರಣೆಯನ್ನು ರೆಡಿ ಮಾಡಿಕೊಂಡು ಅದನ್ನು ರುಬ್ಬಿದ ಮಿಶ್ರಣಕ್ಕೆ ಹಾಕಿ ಮಿಕ್ಸ್ ಮಾಡಿದರೆ ರುಚಿಯಾದ ಕೆಸುವಿನ ಸೊಪ್ಪಿನ ಚಟ್ನಿ ರೆಡಿ.
 
ಬಿಸಿಬಿಸಿಯಾದ ಅನ್ನದ ಜೊತೆ ಮಿಕ್ಸ್ ಮಾಡಿ ತಿನ್ನಲು ಇದು ರುಚಿಯಾಗಿರುತ್ತದೆ. ನೀವೂ ಒಮ್ಮೆ ಮಾಡಿ ನೋಡಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ