ರುಚಿರುಚಿಯಾದ ಪುಳಿಯೊಗರೆ ಮಾಡಿ ಸವಿಯಿರಿ...

ಸೋಮವಾರ, 8 ಅಕ್ಟೋಬರ್ 2018 (15:30 IST)
ಪುಳಿಯೊಗರೆ ಸಾಮಾನ್ಯವಾಗಿ ದಕ್ಷಿಣ ಭಾರತದಲ್ಲಿ ಅದರಲ್ಲೂ ತಮಿಳುನಾಡಿನಲ್ಲಿ ಪ್ರಸಿದ್ಧವಾಗಿರುವ ಒಂದು ತಿಂಡಿ. ಸಾಮಾನ್ಯವಾಗಿ ಅಲ್ಲಿನ ದೇವಸ್ಥಾನಗಳಲ್ಲಿ ಪ್ರಸಾದವಾಗಿ ಪುಳಿಯೊಗರೆಯನ್ನೇ ನೀಡುತ್ತಾರೆ. ಸ್ವಲ್ಪ ಹುಳಿ, ಸ್ವಲ್ಪ ಸಿಹಿಯಾಗಿರುವ ಪುಳಿಯೊಗರೆ ತಿನ್ನಲು ತುಂಬಾ ರುಚಿಯಾಗಿಯೂ ಇರುತ್ತದೆ ಮತ್ತು ಆರೋಗ್ಯಕರವೂ ಹೌದು. ಸಾಮಾನ್ಯವಾಗಿ ದೇವಸ್ಥಾನಗಳಲ್ಲಿ ಮಾಡುವ ಪುಳಿಯೊಗರೆ ರೆಸಿಪಿಗಾಗಿ ಇಲ್ಲಿ ನೋಡಿ.
ಬೇಕಾಗುವ ಸಾಮಗ್ರಿಗಳು:
ಎಣ್ಣೆ - 4-5 ಟೇಬಲ್ ಚಮಚ
ದನಿಯಾ - 1 ಚಮಚ
ಉದ್ದಿನಬೇಳೆ - 3 ಚಮಚ
ಕಡಲೆ ಬೇಳೆ - 3 ಚಮಚ
ಕಾಳುಮೆಣಸು - 1/2 ಚಮಚ
ಮೆಂತೆ - 1/2 ಚಮಚ
ಒಣ ಮೆಣಸು - 4-5
ಬಿಳಿ ಎಳ್ಳು - 1 ಚಮಚ
ಸಾಸಿವೆ - 1 ಚಮಚ
ಶೇಂಗಾ - 3-4 ಚಮಚ
ಕರಿಬೇವು - ಸ್ವಲ್ಪ
ಇಂಗು - ಒಂದು ಚಿಟಿಕೆ
ಹುಣಿಸೆಹಣ್ಣಿನ ರಸ - 1 ಕಪ್
ಅರಿಶಿಣ - 1/4 ಚಮಚ
ಉಪ್ಪು - ರುಚಿಗೆ
ಬೆಲ್ಲ - ರುಚಿಗೆ
ಅನ್ನ - 2 ಕಪ್
 
ಮಾಡುವ ವಿಧಾನ:
ಸಣ್ಣ ಉರಿಯಲ್ಲಿ ಪ್ಯಾನ್ ಅನ್ನು ಸ್ಟೌ ಮೇಲಿಡಿ. ಬಿಸಿಯಾದ ನಂತರ ಒಂದು ಚಮಚ ಎಣ್ಣೆಯನ್ನು ಹಾಕಿ. ನಂತರ 1 ಚಮಚ ದನಿಯಾ, 2 ಚಮಚ ಉದ್ದಿನ ಬೇಳೆ, 2 ಚಮಚ ಕಡಲೆ ಬೇಳೆ, 1/4 ಚಮಚ ಮೆಂತೆ, 1/2 ಚಮಚ ಕಾಳುಮೆಣಸು ಮತ್ತು 4-5 ಕೆಂಪು ಮೆಣಸನ್ನು ಹಾಕಿ 2 ನಿಮಿಷ ಹುರಿದು ಅದನ್ನು ಒಂದು ಪ್ಲೇಟ್‌ನಲ್ಲಿ ಹಾಕಿಕೊಳ್ಳಿ. ಈಗ 1 ಚಮಚ ಬಿಳಿ ಎಳ್ಳನ್ನು ಬೇರೆಯಾಗಿ 
ಹುರಿದು ಈಗಾಗಲೇ ಹುರಿದಿಟ್ಟ ಮಸಾಲೆಗೆ ಸೇರಿಸಿ ಆರಲು ಬಿಡಿ. ಹುರಿದ ಮಸಾಲೆಗಳನ್ನು ಮಿಕ್ಸಿ ಜಾರ್‌ಗೆ ಹಾಕಿ ನುಣ್ಣಗೆ ಪುಡಿ ಮಾಡಿಕೊಳ್ಳಿ.
 
ಈಗ ಪ್ಯಾನ್ ಅನ್ನು ಮಧ್ಯಮ ಉರಿಯಲ್ಲಿ ಸ್ಟೌಮೇಲಿಟ್ಟು ಬಿಸಿಯಾದ ನಂತರ 3-4 ಚಮಚ ಎಣ್ಣೆಯನ್ನು ಹಾಕಿ. ಸಾಸಿವೆ 1 ಚಮಚ, 1/2 ಚಮಚ ಉದ್ದಿನ ಬೇಳೆ, 1/2 ಚಮಚ ಕಡಲೆ ಬೇಳೆ ಮತ್ತು 4-5 ಚಮಚ ಶೇಂಗಾವನ್ನು ಹಾಕಿ 1-2 ನಿಮಿಷ ಹುರಿಯಿರಿ. ನಂತರ ಅದಕ್ಕೆ 1 ಕೆಂಪು ಮೆಣಸು, ಸ್ವಲ್ಪ ಕರಿಬೇವು ಮತ್ತು ಇಂಗನ್ನು ಹಾಕಿ ಮತ್ತೆ 1 ನಿಮಿಷ ಹುರಿಯಿರಿ. ಈಗಾಗಲೇ ಹುಣಿಸೆ ಹಣ್ಣನ್ನು ಕಿವುಚಿ ತಯಾರಿಸಿಕೊಂಡಿರುವ 1 ಕಪ್ ಹುಣಿಸೆ ರಸವನ್ನು ಇದಕ್ಕೆ ಹಾಕಿ ಮಿಕ್ಸ್ ಮಾಡಿ. ಈ ಮಿಶ್ರಣಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಬೆಲ್ಲ ಮತ್ತು 1/2 ಚಮಚ ಅರಿಶಿಣವನ್ನು ಸೇರಿಸಿ 10 ನಿಮಿಷ ಚೆನ್ನಾಗಿ ಕುದಿಸಿ. ಈ ಮಿಶ್ರಣದ ನೀರು ಆವಿಯಾಗಿ ಎಣ್ಣೆ ಬೇರೆಯಾಗುತ್ತಾ ಬಂದಂತೆ ಈಗಾಗಲೇ ತಯಾರಿಸಿಕೊಂಡ ಪುಳಿಯೊಗರೆ ಮಸಾಲೆ ಪುಡಿಯನ್ನು 2-3 ಚಮಚ ಹಾಕಿ ಕಡಿಮೆ ಉರಿಯಲ್ಲಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಇದಕ್ಕೆ 2 ಕಪ್ ಅನ್ನವನ್ನು ಹಾಕಿ ಮಿಕ್ಸ್ ಮಾಡಿಕೊಂಡರೆ ರುಚಿಯಾದ ಪುಳಿಯೊಗರೆ ಸವಿಯಲು ಸಿದ್ಧವಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ