ಯಾವುದೇ ಪದಾರ್ಥದಲ್ಲಿ ರುಚಿಯ ವಿಷಯದಲ್ಲಿ ಉಪ್ಪಿನ ನಂತರದ ಸ್ಥಾನವನ್ನು ಇಂಗಿಗೆ ಕೊಡಬಹುದು. ಇಂಗು ಹಾಕಿದ ಆಹಾರ ಪದಾರ್ಥಗಳ ರುಚಿಯೇ ಬೇರೆಯಾಗಿರುತ್ತದೆ. ಅದಕ್ಕೆ ನಮ್ಮ ಹಿರಿಯರು 'ಇಂಗು ತೆಂಗು ಇದ್ದರೆ ಮಂಗನೂ ಚೆನ್ನಾಗಿ ಅಡುಗೆ ಮಾಡುತ್ತದೆ' ಎಂದಿದ್ದಾರೆ. ಇಂಗು ಆಹಾರ ಪದಾರ್ಥಕ್ಕೆ ಒಳ್ಳೆಯ ಸುವಾಸನೆ ಕೊಡುವುದಲ್ಲದೇ ರುಚಿಯನ್ನೂ ಸಹ ಕೊಡುತ್ತದೆ.
ವಾಸ್ತವವಾಗಿ ಇಂಗು ಇರಾನ್ ದೇಶದಿಂದ ಬಂದಂತಹ ಫೆರುಲಾ ಎಂಬ ಸಸ್ಯದ ವಿವಿಧ ಭಾಗಗಳನ್ನು ಒಣಗಿಸಿ ಮಾಡಿದ ಪುಡಿಯಾಗಿದೆ. ಇದನ್ನು ಒಣಗಿಸಿ ಪುಡಿಯ ರೂಪದಲ್ಲಿಯೂ ಕೊಂಚ ತೇವದ ರೂಪದ ತುಣುಕುಗಳ ರೂಪದಲ್ಲಿಯೂ ದೊರಕುತ್ತದೆ. ಕೆಲವರಿಗೆ ಇಂಗು ಇಲ್ಲದಿದ್ದರೆ ಅಡುಗೆ ಸಂಪೂರ್ಣವೇ ಆಗುವುದಿಲ್ಲ ಮತ್ತು ಅಹಾರ ಪದಾರ್ಥಗಳನ್ನು ಹೆಚ್ಚಿನ ಕಾಲ ಶೇಖರಣೆ ಮಾಡಲು ಬಹಳ ಪ್ರಯೋಜನಕಾರಿಯಾಗಿದೆ. ಕೇವಲ ಅಡುಗೆಯಲ್ಲಿ ಮಾತ್ರವಲ್ಲ, ಇಂಗನ್ನು ಸೇವಿಸುವುದರಿಂದ ಆರೋಗ್ಯಕ್ಕೂ ಹೆಚ್ಚು ಉಪಯೋಗಗಳಿವೆ. ಹೇಗೆ ಅಂತೀರಾ? ನೋಡಿ.
1. ಸಾಮಾನ್ಯವಾಗಿ ನಮಗೆ ಅಸಿಡಿಟಿ, ಅಜೀರ್ಣ, ಹೊಟ್ಟೆಯ ಸಮಸ್ಯೆ, ಹೊಟ್ಟೆಯಲ್ಲಿ ಗ್ಯಾಸ್, ಜಂತು ಹುಳಗಳು, ಹೀಗೆ ಹೊಟ್ಟೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳಿಗೆ ಇಂಗು ದಿವೌಷಧಿಯಾಗಿದೆ. ಅರ್ಧ ಲೋಟ ನೀರಿಗೆ ಕಾಲು ಚಮಚ ಹಿಂಗನ್ನು ಬೆರೆಸಿ ಕುಡಿಯುವುದರಿಂದ ಈ ಎಲ್ಲಾ ಹೊಟ್ಟೆಯ ಬಾಧೆಗಳು ನಿವಾರಣೆಯಾಗುತ್ತವೆ.
2. ದೇಹದ ಯಾವುದಾದರೊಂದು ಅಂಗಾಂಶದ ಜೀವಕೋಶಗಳು ಅಗತ್ಯಕ್ಕೂ ಹೆಚ್ಚು ಬೆಳವಣಿಗೆಯಾದರೆ ಇದು ವಂಶವಾಹಿನಿಯ ಸೂಚನೆಗೆ ವಿರುದ್ಧವಾಗಿದ್ದು ಇಂಗಿನಲ್ಲಿರುವ ವಿಶೇಷ ಗುಣಗಳು ಜೀವಕೋಶಗಳು ಇನ್ನಷ್ಟು ವೃದ್ಧಿಗೊಳ್ಳದಂತೆ ತಡೆಯುತ್ತದೆ.
3. ಆಯುರ್ವೇದದಲ್ಲಿ ಅಸಾಫೋಟಿಡಾವನ್ನು ವಾತ ದೋಷವನ್ನು ನಿವಾರಿಸುವ ಉತ್ತಮ ದ್ರವ್ಯಗಳಲ್ಲಿ ಇಂಗು ಕೂಡಾ ಒಂದು ಎನ್ನುವ ಹೆಗ್ಗಳಿಕೆ ಇದೆ.
4. ಹಲವು ಸಂಶೋಧನೆಗಳ ಪ್ರಕಾರ ಇಂಗು ಕ್ಯಾನ್ಸರ್ ಅಂತಹ ಮಾರಕ ರೋಗವನ್ನು ತಡೆಗಟ್ಟುತ್ತದೆ ಎಂದು ಸಾಬೀತಾಗಿದೆ.
5. ಇಂಗನ್ನು ಸ್ವಲ್ಪ ನೀರಿನೊಂದಿಗೆ ಕರಗಿಸಿ ಹಚ್ಚುವುದರಿಂದ ಮುಖದ ಮೇಲಿನ ಮೊಡವೆ ನಿವಾರಣೆಯಾಗುತ್ತದೆ.
6. ಇಂಗಿನಲ್ಲಿರುವ ಆಂಟಿ ಆಕ್ಸಿಡೆಂಟ್ ಗುಣಗಳು ಬ್ಯಾಕ್ಟೀರಿಯಾ ನಿವಾರಕ ಮತ್ತು ಉರಿಯೂತ ನಿವಾರಕ ಮತ್ತು ಹಲ್ಲು ನೋವನ್ನೂ ಸಹ ಕಡಿಮೆಗೊಳಿಸಲು ಸಮರ್ಥವಾಗಿದೆ.
7. ಇಂಗು ಒಸಡಿನಲ್ಲಿ ರಕ್ತ, ಬಾಯಿಯೊಳಗಣ ಸೋಂಕು ಇತ್ಯಾದಿಗಳನ್ನೂ ಸಹ ಶಮನಗೊಳಿಸುತ್ತದೆ.
8. ಇಂಗು ಬೆರೆಸಿದ ಬಿಸಿ ನೀರನಿಂದ ಮುಕ್ಕಳಿಸಿದರೂ ಹಲ್ಲು ಹುಳುಕಾಗಿದ್ದು ನೋವುಂಟಾಗಿದ್ದರೆ ಶಮನವಾಗುವುದು.
9. ಒಂದು ಲೋಟ ಮಜ್ಜಿಗೆಗೆ ಒಂದು ಚಿಟಿಕೆ ಇಂಗು ಹಾಗೂ ಅರ್ಧ ಚಮಚ ಮೆಂತ್ಯ ಪುಡಿಯನ್ನು ಬೆರೆಸಿ ಕುಡಿದರೆ ಮಹಿಳೆಯರ ಸಮಸ್ಯೆಗಳಾದ ಬಂಜೆತನ, ಅನಪೇಕ್ಷಿತ ಗರ್ಭಪಾತ, ಅಕಾಲಿಕ ಹೆರಿಗೆ ಮತ್ತು ಮುಟ್ಟಿನ ದಿನಗಳ ಅಸಾಧಾರಣ ನೋವೂ ಸಹ ಕಡಿಮೆಯಾಗುತ್ತದೆ.
10. ಕೊಂಚ ಕೊಬ್ಬರಿ ಎಣ್ಣೆಯನ್ನು ಬಿಸಿಮಾಡಿ ಇದಕ್ಕೆ ಚಿಟಿಕೆಯಷ್ಟು ಇಂಗನ್ನು ಸೇರಿಸಿದ ಮಿಶ್ರಣವನ್ನು ಆರಿಸಿ ಒಂದೊಂದು ಹನಿಯನ್ನು ಕಿವಿಗೆ ಹಾಕುವುದರಿಂದ ಕಿವಿನೋವು ಶಮನವಾಗುತ್ತದೆ.
11. ಒಂದು ಕಪ್ ಉಗುರುಬೆಚ್ಚಗಿನ ನೀರಿಗೆ ಚಿಟಿಕೆ ಇಂಗು ಸೇರಿಸಿ ದಿನಕ್ಕೆ ಮೂರು ಬಾರಿ ಕುಡಿಯುವುದರಿಂದ ತಲೆನೋವು, ಶೀತವಾಗಿದ್ದರೆ, ಉರಿಯೂತವಾಗಿದ್ದರೆ ಶಮನವಾಗುತ್ತದೆ.
12. ಚಿಟಿಕೆಯಷ್ಟು ಇಂಗನ್ನು ಒಣ ಶುಂಠಿಯ ಪುಡಿ ಮತ್ತು ಜೇನುತುಪ್ಪವನ್ನು ಉಗುರು ಬೆಚ್ಚನೆಯ ನೀರಿನಲ್ಲಿ ಕರಗಿಸಿ ದಿನಕ್ಕೆ 3 ಬಾರಿ ಕುಡಿಯುವುದರಿಂದ ಉಸಿರಾಟದ ತೊಂದರೆಗಳು ನಿವಾರಣೆಯಾಗುತ್ತದೆ.
13. ಇಂಗಿನಲ್ಲಿರುವ ಉತ್ತೇಜನಕಾರಿಯಾದ ಅಂಶವು ನರಗಳಿಗೆ ಹೆಚ್ಚಿನ ಬಲ ನೀಡುವುದಲ್ಲದೇ ಮಾನಸಿಕ ಒತ್ತಡ, ಹಿಸ್ಟೀತಿಯಾ ತೊಂದರೆಗಳನ್ನೂ ಸಹ ನಿವಾರಿಸುತ್ತದೆ.
14. ಇಂಗಿನಲ್ಲಿರುವ ಫೆರುಲಿಕ್ ಆಸಿಡ್, ಕಾರ್ಬೋಹೈಡ್ರೇಟ್, ಸಲಫರ್ ಮತ್ತು ಟರ್ಫೀನ್ ಅಂಶವು ತ್ವಚೆ ಸಂಬಂಧಿ ಸಮಸ್ಯೆಗಳನ್ನು ನೀಗಿಸಲು ಹೆಚ್ಚು ಸಹಕಾರಿಯಾಗಿದೆ.
15. ಇಂಗಿನಿಂದ ತೆಗೆದ ಎಣ್ಣೆ ಕೂಡಾ ಶುಷ್ಕ ಮತ್ತು ಒಣ ತ್ವಚೆಗೆ ಒಳ್ಳೆಯದು. ಮಲಗುವ ಮುನ್ನ ಈ ಎಣ್ಮೆಯಿಂದ ಮಸಾಜ್ ಮಾಡಿಕೊಂಡರೆ ತ್ವಚೆಯು ಬಿರಿಯುವುದು ತಪ್ಪುತ್ತದೆ.
16. ಕೀಟ. ಜೇನು ಕಡಿತ ಇಂತಹ ಸಮಸ್ಯೆಗಳನ್ನು ತಡೆಯಲು ಇಂಗನ್ನು ಪೇಸ್ಟ್ ರೀತಿಯಲ್ಲಿ ತಯಾರಿಸಿ ಹಚ್ಚುವುದರಿಂದ ಬ್ಯಾಕ್ಟೀರಿಯಾ ವಿರೋಧಿ ಹಾಗೂ ವೈರಸ್ ವಿರೋಧಿ ಅಂಶಗಳು ಈ ಸಮಸ್ಯೆಯನ್ನು ಹೊಡೆದೋಡಿಸುವಲ್ಲಿ ಸಹಕಾರಿಯಾಗಿದೆ.
17. ಆಹಾರ ಪದಾರ್ಥಗಳು ವರ್ಷಗಟ್ಟಲೇ ಕೆಡದೇ ಇರಲು ಇದು ಅಗತ್ಯವಾದ ಪರಿಕರವಾಗಿರುವುದರಿಂದ ಇದನ್ನು ಉಪ್ಪಿನಕಾಯಿ ತಯಾರಿಸುವಾಗ ಬಳಸುತ್ತಾರೆ.
18. ಅಲರ್ಜಿಯಾದರೆ ಇಂಗಿನ ಲೇಪನ ಉತ್ತಮ ಪರಿಹಾರ. ಬ್ಯಾಕ್ಟೀರಿಯಾದಿಂದ ಉಂಟಾದ ಸೋಂಕನ್ನು ನಿವಾರಿಸುವಲ್ಲಿ ಇದು ಸಹಕಾರಿಯಾಗಿದೆ.
19. ನೀರು ಅಥವಾ ಹಾಲಿನ ಕೆನೆಯೊಂದಿಗೆ ಇಂಗನ್ನು ಸೇರಿಸಿ ಮುಖಕ್ಕೆ ಹಚ್ಚುವುದರಿಂದ ಚರ್ಮ ಸುಕ್ಕುಗಟ್ಟುವುದು, ವಯಲ್ಲಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಕಡಿಮೆಗೊಳಿಸುತ್ತದೆ.
ಇಷ್ಟೆಲ್ಲಾ ಆರೋಗ್ಯಕರ ಲಕ್ಷಣಗಳನ್ನು ಹೊಂದಿರುವ ಇಂಗು ಸಾಂಬಾರ್ ಪದಾರ್ಥಗಳಲ್ಲಿ ಅಷ್ಟೇ ಅಲ್ಲದೇ ಅಡುಗೆ ಮನೆಯ ಆಹಾರ ಪದಾರ್ಥಗಳಲ್ಲಿ ರುಚಿಯನ್ನು ಹೆಚ್ಚಿಸುವಲ್ಲಿಯೂ ಪ್ರಮುಖ ಪಾತ್ರವನ್ನು ವಹಿಸುತ್ತದೆ. ರೋಗಗಳ ಲಕ್ಷಣಗಳು ಚಿಕ್ಕದಾಗಿದ್ದಾಗಲೇ ಅದನ್ನು ನಿರ್ಲಕ್ಷಿಸಿ ದೊಡ್ಡ ರೋಗವಾಗಿ ಉಲ್ಬಣಿಸಿದಾಗಲೇ ಅದನ್ನು ಗುಣಪಡಿಸಲು ನಾವು ಹೆಣಗಾಡುತ್ತೇವೆ. ಅದಕ್ಕೂ ಮುಂಚೆಯೇ ರೋಗದ ಸಣ್ಣ ಲಕ್ಷಣಗಳು ಕಂಡಾಗಲೇ ನಾವು ವೈದ್ಯರ ಬಳಿ ಹೋಗುವುದು ಉತ್ತಮ. ಕೆಲವು ರೋಗಗಳಿಗೆ ಪ್ರಥಮ ಚಿಕಿತ್ಸೆಗಳಿದ್ದರೂ ನಂತರ ನಾವು ವೈದ್ಯರ ಸಲಹೆಗಳನ್ನು ತೆಗೆದುಕೊಂಡು ಮುಂದುವರಿಯುವುದು ಉತ್ತಮ.