ಗಣೇಶ ಚತುರ್ಥಿಗೆ ಮಾಡಿ ಸಾಂಪ್ರದಾಯಿಕ ಪಂಚಕಜ್ಜಾಯಗಳು...

ಮಂಗಳವಾರ, 11 ಸೆಪ್ಟಂಬರ್ 2018 (15:23 IST)
ಗಣೇಶನ ಹಬ್ಬವೆಂದರೆ ತಿಂಡಿಗಳ ಜಾತ್ರೆ. ಮೋದಕ, ಚಕ್ಕುಲಿ, ಕಡುಬು, ಲಡ್ಡು, ಹೋಳಿಗೆ.. ಹೀಗೆ ಪಟ್ಟಿ ಹನುಮನ ಬಾಲದಂತೆ ಉದ್ದವಾಗುತ್ತಲೇ ಹೋಗುತ್ತದೆ. ಗಣೇಶ ಚತುರ್ಥಿ, ನವರಾತ್ರಿಯಂತಹ ಹಬ್ಬಗಳಲ್ಲಿ ಸಾಮಾನ್ಯವಾಗಿ ಹೆಚ್ಚಿನ ಜನರು ಸಾಂಪ್ರದಾಯಿಕವಾದ ಪಂಚಕಜ್ಜಾಯಗಳನ್ನು ಮಾಡುತ್ತಾರೆ. ನಿಮಗೆ ಇದರ ಕುರಿತು ತಿಳಿದಿರದಿದ್ದರೆ ಸರಳ ಸಾಂಪ್ರದಾಯಿಕವಾದ ಈ ತಿಂಡಿಯನ್ನು ಮಾಡುವುದು ಹೇಗೆ ಎಂಬುದನ್ನು ಇಲ್ಲಿ ನೋಡಿ.
1. ಎಳ್ಳಿನ ಪಂಚಕಜ್ಜಾಯ
 
ಬೇಕಾಗುವ ಸಾಮಗ್ರಿಗಳು:
ಬಿಳಿ ಎಳ್ಳು - 1 1/2 ಕಪ್
ಕಾಯಿತುರಿ - 1 ಕಪ್
ತುರಿದ ಬೆಲ್ಲ - 1 1/2 ಕಪ್
ಏಲಕ್ಕಿಪುಡಿ - 2 ಚಮಚ
ಗೋಡಂಬಿ - 1/4 ಕಪ್
ತುಪ್ಪ - 2 ಚಮಚ
 
ಮಾಡುವ ವಿಧಾನ: ಎಳ್ಳನ್ನು ಚಿಕ್ಕ ಉರಿಯಲ್ಲಿ ಹುರಿದಿಟ್ಟುಕೊಳ್ಳಿ. ಬಾಣಲೆಯಲ್ಲಿ ಕಾಯಿತುರಿ, ತುಪ್ಪ ಮತ್ತು ಬೆಲ್ಲವನ್ನು ಹಾಕಿ ಮಧ್ಯಮ ಉರಿಯಲ್ಲಿ ಚೆನ್ನಾಗಿ ಮಿಕ್ಸ್ ಮಾಡುತ್ತಿರಿ. ಈ ಮಿಶ್ರಣ ಪಾಕ ಬಂದು ತಳ ಬಿಡುತ್ತಾ ಬಂದಂತೆ ಈ ಮೊದಲೇ ಹುರಿದಿಟ್ಟ ಎಳ್ಳು, ಏಲಕ್ಕಿಪುಡಿ ಮತ್ತು ಗೋಡಂಬಿಯನ್ನು ಸೇರಿಸಿದರೆ ರುಚಿಯಾದ ಎಳ್ಳಿನ ಪಂಚಕಜ್ಜಾಯ ಸಿದ್ಧವಾಗುತ್ತದೆ. ಇದರೊಂದಿಗೆ ಗೋಡಂಬಿಯ ಬದಲಿಗೆ ಹುರಿದ ಶೇಂಗಾವನ್ನು ಸೇರಿಸಿಕೊಳ್ಳಬಹುದಾಗಿದೆ.
 
2. ಹೆಸರು ಬೇಳೆ ಪಂಚಕಜ್ಜಾಯ
 
ಬೇಕಾಗುವ ಸಾಮಗ್ರಿಗಳು:
ಹೆಸರು ಬೇಳೆ - 2 ಕಪ್
ಕಾಯಿತುರಿ - 1 ಕಪ್
ತುರಿದಬೆಲ್ಲ - 11/2 ಕಪ್
ಗೋಡಂಬಿ - ಸ್ವಲ್ಪ
ಏಲಕ್ಕಿ ಪುಡಿ - 2 ಚಮಚ
ತುಪ್ಪ - 2 ಚಮಚ
 
ಮಾಡುವ ವಿಧಾನ: 2-3 ಗಂಟೆ ನೆನೆಸಿಟ್ಟ ಹೆಸರು ಬೇಳೆಯನ್ನು ಕುಕ್ಕರ್‌ನಲ್ಲಿ 2-3 ಸೀಟಿ ಹಾಕಿಸಿ ಚೆನ್ನಾಗಿ ಬೇಯಿಸಿಕೊಳ್ಳಿ. ನಂತರ ಅದರಲ್ಲಿರುವ ನೀರನ್ನು ಚೆನ್ನಾಗಿ ಬಸಿದುಕೊಳ್ಳಿ. ಒಂದು ದಪ್ಪ ತಳದ ಪಾತ್ರೆಯಲ್ಲಿ ಕಾಯಿತುರಿ, ತುಪ್ಪ ಮತ್ತು ಬೆಲ್ಲವನ್ನು ಹಾಕಿ ಮಧ್ಯಮ ಉರಿಯಲ್ಲಿ ಚೆನ್ನಾಗಿ ತಿರುವುತ್ತಿರಿ. ಬೆಲ್ಲವು ನೀರಾಗಿ ಕುದಿಯುತ್ತಿರುವಂತೆ ಅದಕ್ಕೆ ಬೇಯಿಸಿದ ಹೆಸರು ಬೇಳೆಯನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಹೀಗೆ ಇದು ಸ್ವಲ್ಪ ದಪ್ಪವಾದಾಗ ಗೋಡಂಬಿ ಮತ್ತು ಏಲಕ್ಕಿಪುಡಿಯನ್ನು ಸೇರಿಸಿ ಸ್ಟೌ ಆಫ್ ಮಾಡಿದರೆ ರುಚಿಯಾದ ಹೆಸರುಬೇಳೆ ಪಂಚಕಜ್ಜಾಯ ರೆಡಿಯಾಗುತ್ತದೆ. ಇದರೊಂದಿಗೆ ತುಪ್ಪವನ್ನು ಬೆರೆಸಿ ತಿಂದರೆ ರುಚಿಯಾಗಿರುತ್ತದೆ. ಇದೇ ವಿಧಾನದಲ್ಲಿ ಕಡಲೆ ಬೇಳೆ ಪಂಜಕಜ್ಜಾಯವನ್ನೂ ಸಹ ಮಾಡಿಕೊಳ್ಳಬಹುದು.
 
3. ಕಡಲೆಬೇಳೆ ಪಂಚಕಜ್ಜಾಯ
 
ಕಡಲೆಬೇಳೆ - 1 ಕಪ್
ಬಿಳಿ ಎಳ್ಳು - 1/4 ಕಪ್
ಕಾಯಿ ತುರಿ - 1 ಕಪ್
ಬೆಲ್ಲ - 1 1/2 ಕಪ್
ಏಲಕ್ಕಿಪುಡಿ - 1 ಚಮಚ
ತುಪ್ಪ - 2 ಚಮಚ
ಹುರಿದ ಶೇಂಗಾ ಅಥವಾ ಗೋಡಂಬಿ - ಸ್ವಲ್ಪ
 
ಮಾಡುವ ವಿಧಾನ: ಎಳ್ಳು ಮತ್ತು ಕಡಲೆ ಬೇಳೆಯನ್ನು ಚಿಕ್ಕ ಉರಿಯಲ್ಲಿ ಹುರಿದು ತಣ್ಣಗಾದ ಮೇಲೆ ಮಿಕ್ಸಿಯಲ್ಲಿ ತರಿತರಿಯಾಗಿ ರುಬ್ಬಿಟ್ಟುಕೊಳ್ಳಿ. ಬಾಣಲೆಯಲ್ಲಿ ಕಾಯಿತುರಿ, ತುಪ್ಪ ಮತ್ತು ಬೆಲ್ಲವನ್ನು ಹಾಕಿ ಮಧ್ಯಮ ಉರಿಯಲ್ಲಿ ಚೆನ್ನಾಗಿ ಮಿಕ್ಸ್ ಮಾಡುತ್ತಿರಿ. ಈ ಮಿಶ್ರಣ ಪಾಕ ಬಂದು ತಳ ಬಿಡುತ್ತಾ ಬಂದಂತೆ ಈ ಮೊದಲೇ ರುಬ್ಬಿದ ಮಿಶ್ರಣ, ಏಲಕ್ಕಿಪುಡಿ ಮತ್ತು ಗೋಡಂಬಿಯನ್ನು ಸೇರಿಸಿದರೆ ರುಚಿಯಾದ ಕಡಲೆಬೇಳೆ ಪಂಚಕಜ್ಜಾಯ ಸಿದ್ಧವಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ