ಬಿಸಿ ಬಿಸಿಯಾದ ರುಚಿಯಾದ ಟೊಮೆಟೊ ರಸಂ

ಮಂಗಳವಾರ, 4 ಸೆಪ್ಟಂಬರ್ 2018 (16:11 IST)
ಸಾಮಾನ್ಯವಾಗಿ ನಮ್ಮ ಮಹಿಳೆಯರಿಗೆ ಅಡುಗೆ ಮನೆಯಲ್ಲಿ ಬೇರೆ ಯಾವುದೇ ತರಕಾರಿ ಇದ್ದರೂ ಟೊಮೆಟೊ ಇದ್ದ ಹಾಗೆ ಆಗಲ್ಲ. ಟೊಮೆಟೊ ಬಳಸಿ ಮಾಡುವ ಆಹಾರ ಪದಾರ್ಥಗಳೆಲ್ಲವೂ ರುಚಿ ರುಚಿಯಾಗಿ ಹುಳಿ ಹುಳಿಯಾಗಿ ಇರುತ್ತದೆ. ಏನೇ ಆದ್ರೂ ಪದಾರ್ಥವನ್ನು ಬಿಸಿ ಬಿಸಿಯಾಗಿ ತಿಂದ್ರೆನೇ ಮಜಾ. ಅಂತಹ ಆಹಾರ ಪದಾರ್ಥದ ಸಾಲಿಗೆ ಟೊಮೆಟೊ ರಸಂ ಕೂಡಾ ಸೇರತ್ತೆ. ಹಾಗಾದ್ರೆ ಟೊಮೆಟೊ ರಸಂ ಅನ್ನು ಮಾಡೋದು ಹೇಗೆ ಅಂತಾ ಹೇಳ್ತೀವಿ ಕೇಳಿ..
ಬೇಕಾಗುವ ಸಾಮಗ್ರಿಗಳು:
 
ಟೊಮೆಟೊ  - 5 ರಿಂದ 6 (ಸಣ್ಣಗೆ ಹೆಚ್ಚಿದ್ದು)
ಹಸಿ ಮೆಣಸಿನ ಕಾಯಿ  - 5 ರಿಂದ 6 (ಉದ್ದಕ್ಕೆ ಹೆಚ್ಚಿಟ್ಟುಕೊಳ್ಳಿ)
ಹುರಿದು ಪುಡಿ ಮಾಡಿದ ಶೇಂಗಾ - ಅರ್ಧ ಬಟ್ಟಲು
ಕಾಯಿ ತುರಿ - ಅರ್ಧ ಬಟ್ಟಲು
ಸಾಂಬಾರ್ ಪುಡಿ ಅಥವಾ ಸಾರಿನ ಪುಡಿ - 1 ಚಮಚ
ಉಪ್ಪು - ರುಚಿಗೆ ತಕ್ಕಷ್ಟು
ಬೆಲ್ಲ - 3 ರಿಂದ 4 ಚಮಚ
ಕರಿಬೇವು, ಕೊತ್ತಂಬರಿ, ಒಗ್ಗರಣೆಗೆ ಎಣ್ಣೆ, ಸಾಸಿವೆ, ಇಂಗು, ಅರಿಷಿಣ ಪುಡಿ
 
ಮಾಡುವ ವಿಧಾನ :
 
ಒಂದು ಪ್ಯಾನ್‌ನಲ್ಲಿ ಎಣ್ಣೆ, ಸಾಸಿವೆ, ಇಂಗು, ಅರಿಷಿಣ ಪುಡಿ, ಕರಿಬೇವು ಹಾಕಿ ಒಗ್ಗರಣೆ ಮಾಡಬೇಕು. ಅದಕ್ಕೆ (ಉದ್ದಕ್ಕೆ ಹೆಚ್ಚಿಕೊಂಡ) ಮೆಣಸಿನಕಾಯಿ ಹಾಕಿ ಬಾಡಿಸಬೇಕು. ಈಗ (ಸಣ್ಣಗೆ ಹೆಚ್ಚಿಕೊಂಡ) ಟೊಮೆಟೊ ಹಾಕಿ ಚೆನ್ನಾಗಿ ಬೇಯಿಸಬೇಕು. ನಂತರ 2 ಲೋಟ ನೀರು ಹಾಕಿ ಕುದಿಸಿ ಅದಕ್ಕೆ ಉಪ್ಪು, ಸಾಂಬಾರ್ ಪುಡಿ, ಬೆಲ್ಲ, ಕಾಯಿತುರಿ ಹಾಕಿ ಚೆನ್ನಾಗಿ ಕುದಿಸಬೇಕು. ಕೊನೆಯಲ್ಲಿ ಇದಕ್ಕೆ ಶೇಂಗಾ ಪುಡಿ, ಕೊತ್ತಂಬರಿ ಸೊಪ್ಪು ಹಾಕಬೇಕು. ಈಗ ರುಚಿ ರುಚಿಯಾದ ಟೊಮೆಟೊ ರಸಂ ಸವಿಯಲು ಸಿದ್ಧ. ಈ ರಸಂ ಅನ್ನು ಅನ್ನ, ಚಪಾತಿ, ಪೂರಿ ಹೀಗೆ ಎಲ್ಲದರ ಜೊತೆ ಸೇರಿಸಿ ತಿನ್ನಬಹುದು.   

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ