ಉತ್ತಪ್ಪ (ಈರುಳ್ಳಿದೋಸೆ)

ನಾಗಶ್ರೀ ಭಟ್

ಶುಕ್ರವಾರ, 29 ಡಿಸೆಂಬರ್ 2017 (12:59 IST)
ದಿನ ನಿತ್ಯ ಒಂದೇ ತರಹದ ದೋಸೆ ತಿಂದು ಬೇಜಾರಾಗಿದ್ದು, ಸ್ವಲ್ಲ ವಿಭಿನ್ನ ರುಚಿಯಲ್ಲಿ ದೋಸೆಯನ್ನು ಮಾಡಿ ತಿನ್ನಬೇಕು ಎಂದು ನೀವು ಬಯಸಿದರೆ ರುಚಿಕರವಾದ ಆರೋಗ್ಯದಾಯಕವಾದ ದೋಸೆ ನೀವು ಮನೆಯಲ್ಲೇ ಸುಲಭವಾಗಿ ತಯಾರಿಸಬಹುದು ಹೇಗೆ ಅಂತೀರಾ ಇಲ್ಲಿದೆ ಮಾಹಿತಿ.

 
ಬೇಕಾಗುವ ಸಾಮಗ್ರಿಗಳು:
 
ಉದ್ದಿನ ಬೇಳೆ - 1 ಕಪ್
ದೋಸೆ ಅಕ್ಕಿ - 2 1/2 ಕಪ್
ಮೆಂತ್ಯ - 2 ಚಮಚ
ಅವಲಕ್ಕಿ - 1/2 ಕಪ್
ಈರುಳ್ಳಿ - 3-4
ಟೊಮೆಟೋ - 1-2
ಕ್ಯಾರೆಟ್ - 2-3
ಶುಂಠಿ - 1 ಇಂಚು
ಹಸಿಮೆಣಸು - 2-3
ಅಚ್ಚಖಾರದ ಪುಡಿ - 2-3 ಚಮಚ
ಕರಿಬೇವು - ಒಂದು ಹಿಡಿ
ಕೊತ್ತಂಬರಿ ಸೊಪ್ಪು - 1/2 ಕಟ್ಟು
ಉಪ್ಪು - ರುಚಿಗೆ
ಸಕ್ಕರೆ - 1 ಚಮಚ
ತುಪ್ಪ ಅಥವಾ ಎಣ್ಣೆ - 1/2 ಕಪ್
 
ಮಾಡುವ ವಿಧಾನ:
 
ಒಂದು ಬೌಲ್‌ನಲ್ಲಿ ಉದ್ದಿನ ಬೇಳೆಯನ್ನು ಮತ್ತು ಇನ್ನೊಂದು ಬೌಲ್‌ನಲ್ಲಿ ಅಕ್ಕಿ ಮತ್ತು ಮೆಂತೆಯನ್ನು 5-6 ಗಂಟೆ ನೆನೆಸಿಡಿ. ನಂತರ ನೆನೆಸಿರುವ ಉದ್ದಿನ ಬೇಳೆ, ಅಕ್ಕಿ ಮತ್ತು ಮೆಂತೆಯನ್ನು ಚೆನ್ನಾಗಿ ತೊಳೆದು ಅದನ್ನು ಸೋಸಿಟ್ಟುಕೊಳ್ಳಿ. ಇನ್ನೊಂದು ಪಾತ್ರೆಯಲ್ಲಿ ಅವಲಕ್ಕಿಯನ್ನು ತೊಳೆದು ಅದಕ್ಕೆ ನೆನಸಿದ ಮೆಂತ್ಯ ಮತ್ತು ಅಕ್ಕಿಯನ್ನು ಹಾಕಿ ಅದನ್ನು ಒಂದು ಜಾರಿನಲ್ಲಿ ಹಾಕಿ 1 ಕಪ್ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ನೆನೆಸಿಟ್ಟ ಉದ್ದಿನ ಬೇಳೆಗೆ ಅಗತ್ಯವಿರುವಷ್ಟು ನೀರನ್ನು ಹಾಕಿ ಅದನ್ನು ನುಣ್ಣಗೆ ರುಬ್ಬಿಕೊಳ್ಳಿ ಮತ್ತು ಈ ಮೊದಲೇ ರುಬ್ಬಿಟ್ಟುಕೊಂಡ ಮಿಶ್ರಣವನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಈ ಮಿಶ್ರಣ ಸಾಮಾನ್ಯವಾದ ದೋಸೆ ಹಿಟ್ಟಿಗಿಂತ ಸ್ವಲ್ಪ ಗಟ್ಟಿಯಾಗಿರಲಿ. ಈ ಮಿಶ್ರಣಕ್ಕೆ ಅಗತ್ಯವಿರುವಷ್ಟು ಉಪ್ಪು ಮತ್ತು 1 ಚಮಚ ಸಕ್ಕರೆಯನ್ನು ಸೇರಿಸಿ ಸುಮಾರು 8-10 ಗಂಟೆಗಳ ಕಾಲ ಹಾಗೆಯೇ ಬಿಡಿ.
 
ನಂತರ ಉತ್ತಪ್ಪ ತಯಾರಿಸಲು ಬೇಕಾದ ತರಕಾರಿಗಳಾದ ಟೊಮೆಟೋ, ಈರುಳ್ಳಿ, ಶುಂಠಿ, ಕೊತ್ತಂಬರಿ ಸೊಪ್ಪು, ಹಸಿಮೆಣಸು ಮತ್ತು ಕರಿಬೇವನ್ನು ಬೇರೆ ಬೇರೆಯಾಗಿ ಸಣ್ಣಗೆ ಹಚ್ಚಿಟ್ಟುಕೊಳ್ಳಿ. ಕ್ಯಾರೆಟ್ ಅನ್ನು ತುರಿದಿಟ್ಟುಕೊಳ್ಳಿ. ನಂತರ ಈ ಮೊದಲೇ ಮಾಡಿರುವ ದೋಸೆಯ ಹಿಟ್ಟನ್ನು ಚೆನ್ನಾಗಿ ಮಿಕ್ಸ್ ಮಾಡಿ.ಅದಕ್ಕೆ ಹೆಚ್ಚಿದ ಸಾಮಗ್ರಿಗಳು, ತುರಿದ ಕ್ಯಾರೆಟ್ ಮತ್ತು ಅಚ್ಚಖಾರದ ಪುಡಿಯನ್ನು ಸೇರಿಸಿ ಇನ್ನೊಮ್ಮೆ ಮಿಕ್ಸ್ ಮಾಡಿದರೆ ದೋಸೆ ಹಿಟ್ಟು ರೆಡಿಯಾಗುತ್ತದೆ. ಮಧ್ಯಮ ಉರಿಯಲ್ಲಿ ದೋಸೆಯ ಹೆಂಚನ್ನು ಸ್ಟೌ ಮೇಲಿಟ್ಟು ಸ್ವಲ್ಪ ನೀರನ್ನು ಚಿಮುಕಿಸಿ. ನಂತರ ಸ್ಪಲ್ಪ ದೋಸೆ ಹಿಟ್ಟನ್ನು ಹೆಂಚಿನ ಮೇಲೆ ಹಾಕಿ ಸ್ಪಲ್ಪ ಹರಡಿ ಅದಕ್ಕೆ 2-3 ಚಮಚ ತುಪ್ಪ ಅಥವಾ ಎಣ್ಣೆಯನ್ನು ಹಾಕಿ. ದೋಸೆಯ ಎರಡು ಕಡೆ ಸ್ವಲ್ಪ ಬೇಯಿಸಿದರೆ ಉತ್ತಪ್ಪ ರೆಡಿ.  ಉತ್ತಪ್ಪವನ್ನು ನೀವು ಕೊಬ್ಬರಿ ಚಟ್ನಿಯೊಂದಿಗೆ ತಿಂದರೆ ತುಂಬಾ ರುಚಿಯಾಗಿರುತ್ತದೆ. ನೀವೂ ಒಮ್ಮೆ ಮಾಡಿ ಸವಿಯಿರಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ