ಪ್ಯಾರಿಸ್: ಒಲಿಂಪಿಕ್ಸ್‌ನಲ್ಲಿ ಭಾರತದ ಕುಸ್ತಿಪಟು ವಿನೇಶ್ ಫೋಗಟ್ ಅನರ್ಹಗೊಂಡ ಬೆನ್ನಲ್ಲೇ ಭಾರತದ ಮತ್ತೊಬ್ಬ ಕುಸ್ತಿಪಟು ಎಡವಟ್ಟು ಮಾಡಿಕೊಂಡಿದ್ದು, ಈ ತಪ್ಪಿಗೆ ಅವರಿಗೆ ಮೂರು ವರ್ಷಗಳ ನಿಷೇಧದ ಭೀತಿ ಎದುರಾಗಿದೆ.
ಕ್ರೀಡಾಕೂಟದಲ್ಲಿ ಗಂಭೀರ ಅಶಿಸ್ತು ಪ್ರದರ್ಶಿಸಿದ ಭಾರತದ ಕುಸ್ತಿಪಟು ಅಂತಿಮ್ ಪಂಘಲ್ ಅವರಿಗೆ ಭಾರತೀಯ ಒಲಿಂಪಿಕ್ಸ್ ಸಂಸ್ಥೆ(ಐಒಎ) 3 ವರ್ಷಗಳ ಕಾಲ ನಿಷೇಧ ಹೇರುವ ಸಾಧ್ಯತೆ ಇದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಅಂತಿಮ್ ಅವರು ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿ ಆರಂಭದ ಸುತ್ತಿನಲ್ಲೇ ಹೊರಬಿದ್ದಿದ್ದರು.
ಅಂತಿಮ್ ಅವರ ತಪ್ಪದಾರೇನು:
ತನ್ನ ಅಕ್ರೆಡಿಟೇಶನ್ ಕಾರ್ಡ್ ಅನ್ನು ಸಹೋದರಿಗೆ ನೀಡಿ ಒಲಿಂಪಿಕ್ಸ್‌ನ ಕ್ರೀಡಾ ಗ್ರಾಮಕ್ಕೆ ಪ್ರವೇಶ ಕೊಡಿಸಲು ಯತ್ನಿಸಿ, ಸಿಕ್ಕಿಬಿದ್ದಿದರು. ಇದರಿಂದ ಭಾರತದ ಒಲಿಂಪಿಕ್ ತಂಡಕ್ಕೆ ತೀವ್ರ ಮುಜುಗರ ಉಂಟು ಮಾಡಿರುವ ಹಿನ್ನೆಲೆಯಲ್ಲಿ ಐಒಎ ಕ್ರಮ ಕೈಗೊಳ್ಳಲಿದೆ ಎಂದು ತಿಳಿದುಬಂದಿದೆ.
ಪಂಘಾಲ್ ಅವರು ಭಾರತಕ್ಕೆ ಆಗಮಿಸಿದ ಬಳಿಕ ನಿಷೇಧದ ಕುರಿತಂತೆ ಅಧಿಕೃತ ಆದೇಶ ಹೊರಬೀಳಲಿದೆ ಎಂದು ಮೂಲಗಳು ತಿಳಿಸಿವೆ.
ಬುಧವಾರ 53 ಕೆ.ಜಿ ವಿಭಾಗದ ಆರಂಭಿಕ ಬೌಟ್‌ನಲ್ಲೇ ಸೋತ ಬಳಿಕ ಅಂತಿಮ್ ಪಂಘಲ್ ಅಥ್ಲೆಟ್ಸ್ ವಿಲೇಜ್‌ಗೆ ತೆರಳದೆ ಕೋಚ್‌ಗಳಿದ್ದ ಹೋಟೆಲ್‌ಗೆ ಬಂದಿದ್ದರು. ಈ ವೇಳೆ ತನ್ನ ಸಹೋದರಿಗೆ ಕಾರ್ಡ್ ನೀಡಿ ಕ್ರೀಡಾ ಗ್ರಾಮದಿಂದ ತಮ್ಮ ವಸ್ತುಗಳನ್ನು ತರುವಂತೆ ಹೇಳಿ ಕಳುಹಿಸಿದ್ದಾರೆ. ಅವರ ಸಹೋದರಿಯನ್ನು ಪ್ರವೇಶದ ಸಂದರ್ಭದಲ್ಲೇ ಹಿಡಿದ ಭದ್ರತಾ ಸಿಬ್ಬಂದಿ ಸ್ಥಳೀಯ ಪೊಲೀಸ್ ಠಾಣೆಗೆ ಕರೆದೊಯ್ದು ಹೇಳಿಕೆ ದಾಖಲಿಸಿದ್ದಾರೆ ಎಂದು ವರದಿ ತಿಳಿಸಿದೆ.