ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ 50 ಕೆ.ಜಿ. ವಿಭಾಗದ ಕುಸ್ತಿ ಸ್ಪರ್ಧೆಯಲ್ಲಿ ಫೈನಲ್ ಗೇರಿ ಇತಿಹಾಸ ನಿರ್ಮಿಸಿದ್ದ ವಿನೇಶ್ ಫೋಗಟ್ ರನ್ನು ಬೇಕೆಂದೇ ಅನರ್ಹಗೊಳಿಸಲಾಯಿತೇ? ಹೀಗೊಂದು ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ಶುರುವಾಗಿದೆ.
ವಿನೇಶ್ ಫೋಗಟ್ ಈ ಹಿಂದೆ ಕುಸ್ತಿ ಫೆಡರೇಶನ್ ಅಧ್ಯಕ್ಷರಾಗಿದ್ದ ಬ್ರಿಜ್ ಭೂಷಣ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿ ಹೋರಾಟ ಮಾಡಿದ ಕುಸ್ತಿಪಟುಗಳಲ್ಲಿ ಒಬ್ಬರಾಗಿದ್ದರು. ಈ ಬಾರಿ ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದು ಬ್ರಿಜ್ ಭೂಷಣ್ ಗೆ ತೋರಿಸಬೇಕು ಎಂದು ಅವರಿಗೆ ಜಿದ್ದು ಇತ್ತು.
ವಿನೇಶ್ ಫೈನಲ್ ಗೇರಿದಾಗ ಹಲವರು ಕೇಂದ್ರ ಸರ್ಕಾರದ ವಿರುದ್ಧ, ಬ್ರಿಜ್ ಭೂಷಣ್ ವಿರುದ್ಧ ಕುಹುಕವಾಡಿದ್ದರು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯಂತೂ ವಿನೇಶ್ ವಿರುದ್ಧ ಲಾಠಿ ಪ್ರಯೋಗ ಮಾಡಿದ ಬಿಜೆಪಿ ನಾಯಕರಿಗೆ ಈಗ ಅವರಿಗೆ ಅಭಿನಂದನೆ ಸಲ್ಲಿಸಲು ಸಾಧ್ಯವಾಗುತ್ತಿದೆಯೇ ಎಂದು ಕಾಲೆಳೆದಿದ್ದರು.
ಇದರ ನಡುವೆ ವಿನೇಶ್ ಫೈನಲ್ ಗೆದ್ದ ಬಳಿಕ ಮಾತನಾಡುವುದಾಗಿ ಮೊದಲೇ ಹೇಳಿದ್ದರು. ಅವರು ಫೈನಲ್ ಗೆದ್ದ ಬಳಿಕ ಏನು ಮಾತನಾಡಬಹುದು ಎಂಬುದು ಎಲ್ಲರಿಗೂ ಅಂದಾಜಿತ್ತು. ಇದರ ಬೆನ್ನಲ್ಲೇ ಅವರು ಕೇವಲ 100 ಗ್ರಾಂ ತೂಕ ಹೆಚ್ಚಾಯಿತು ಎಂಬ ಕಾರಣಕ್ಕೆ ಫೈನಲ್ ನಿಂದ ಅನರ್ಹಗೊಂಡಿರುವುದರ ಹಿಂದೆ ಕಾಣದ ಕೈಗಳ ಕೈವಾಡವಿರಬಹುದು ಎಂದು ಕೆಲವರು ಸೋಷಿಯಲ್ ಮೀಡಿಯಾಗಳಲ್ಲಿ ಅಭಿಪ್ರಾಯಪಡುತ್ತಿದ್ದಾರೆ. ಅದೇನೇ ಇದ್ದರೂ ಭಾರತಕ್ಕೆ ಅರ್ಹವಾಗಿದ್ದ ಒಂದು ಪದಕ ನಷ್ಟವಾಗಿದ್ದು ಕ್ರೀಡಾಭಿಮಾನಿಗಳಿಗೆ ಬೇಸರ ತಂದಿದೆ.