ಫೈನಲ್ ನಿಂದ ಅನರ್ಹರಾದ ಬೆನ್ನಲ್ಲೇ ಆಸ್ಪತ್ರೆಗೆ ದಾಖಲಾದ ಕುಸ್ತಿಪಟು ವಿನೇಶ್ ಫೋಗಟ್
ವಿನೇಶ್ ಫೋಗಟ್ ನಿಗದಿತ ತೂಕಕ್ಕಿಂತ 100 ಗ್ರಾಂ. ತೂಕ ಹೆಚ್ಚಳವಾಗಿರುವ ಕಾರಣಕ್ಕೆ ಅವರನ್ನು ಫೈನಲ್ ನಿಂದ ಅನರ್ಹಗೊಳಿಸಲಾಯಿತು. ಈ ಸಂದರ್ಭದಲ್ಲಿ ಇಡೀ ದೇಶವೇ ಅವರ ಜೊತೆಗೆ ನಿಂತಿದೆ. ಸ್ವತಃ ಪ್ರಧಾನಿ ಮೋದಿ ಕೂಡಾ ಟ್ವೀಟ್ ಮಾಡಿ ವಿನೇಶ್ ಗೆ ಧೈರ್ಯ ಹೇಳಿದ್ದಾರೆ.
ಈ ನಡುವೆ ಅವರಿಗೆ ಫೈನಲ್ ನಲ್ಲಿ ತೂಕ ಹೆಚ್ಚಳದಿಂದ ಅನರ್ಹಗೊಳ್ಳುವ ಭೀತಿ ಮೊದಲೇ ಇತ್ತು ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ನಿನ್ನೆ ರಾತ್ರಿಯಿಡೀ ಅವರು ತೂಕ ಕಳೆದುಕೊಳ್ಳಲು ಸಾಕಷ್ಟು ಶ್ರಮಿಸಿದ್ದರು. ಇದರಿಂದಾಗಿ ಅವರು ನಿರ್ಜಲೀಕರಣಕ್ಕೊಳಗಾಗಿದ್ದಾರೆ. ಹೀಗಾಗಿ ಅಸ್ವಸ್ಥಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿನೇಶ್ ಗೆ ಭಾರತೀಯ ಒಲಿಂಪಿಕ್ಸ್ ಸಮಿತಿ ಮುಖ್ಯಸ್ಥೆ ಪಿಟಿ ಉಷಾ ಸೇರಿದಂತೆ ಅಧಿಕಾರಿಗಳ ತಂಡ ಸಾಥ್ ನೀಡಿದೆ. ಒಂದೆಡೆ ನಿರ್ಜಲೀಕರಣ, ಇನ್ನೊಂದೆಡೆ ಫೈನಲ್ ನಿಂದ ಅನರ್ಹಗೊಂಡ ನಿರಾಸೆಯಿಂದ ವಿನೇಶ್ ತೀರಾ ಕುಗ್ಗಿ ಹೋಗಿದ್ದಾರೆ ಎನ್ನಲಾಗಿದೆ. ಈ ನಡುವೆ ಅವರು ಪದಕ ಗೆಲ್ಲದೇ ಇದ್ದರೂ ಇಡೀ ದೇಶವೇ ಅವರನ್ನು ಚಾಂಪಿಯನ್ ಎಂದು ಕರೆದಿದ್ದು ಸ್ಥೈರ್ಯ ತುಂಬುವ ಕೆಲಸ ಮಾಡುತ್ತಿದೆ.