ನವದೆಹಲಿ: ಕುಸ್ತಿ ಫೆಡರೇಷನ್ ಅಧ್ಯಕ್ಷರಾಗಿದ್ದ ಬ್ರಿಜ್ ಭೂಷಣ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿ ಪ್ರತಿಭಟನೆ ನಡೆಸಿದ್ದ ಕುಸ್ತಿಪಟುಗಳಲ್ಲಿ ವಿನೇಶ್ ಫೋಗಟ್ ಕೂಡಾ ಒಬ್ಬರು. ಅಂದು ಬ್ರಿಜ್ ವಿರುದ್ಧ ಶಪಥ ಮಾಡಿದ್ದ ವಿನೇಶ್ ಇನ್ನೇನು ಅದನ್ನು ಪೂರೈಸುವ ಉತ್ಸಾಹದಲ್ಲಿದ್ದರು. ಆದರೆ ಅದೀಗ ಸುಳ್ಳಾಗಿದೆ.
ಬಿಜೆಪಿ ನಾಯಕರೂ ಆಗಿದ್ದ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್ ಭೂಷಣ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿ ಅವರನ್ನು ಕಿತ್ತು ಹಾಕಬೇಕೆಂದು ಕೇಂದ್ರ ಸರ್ಕಾರದ ವಿರುದ್ಧವೇ ಸಿಡಿದು ನಿಂತ ಕುಸ್ತಿಪಟುಗಳಲ್ಲಿ ವಿನೇಶ್ ಕೂಡಾ ಒಬ್ಬರು. ಅವರ ಹೊರತಾಗಿ ಸಾಕ್ಷಿ ಮಲಿಕ್, ಬಜರಂಗ್ ಪೂನಿಯಾ ಮುಂತಾದವರು ಇದ್ದರು.
ಒಂದು ಹಂತದಲ್ಲಿ ವಿನೇಶ್ ಈ ಒಲಿಂಪಿಕ್ಸ್ ನಲ್ಲಿ ನಾನು ಚೆನ್ನಾಗಿ ತರಬೇತಿ ಪಡೆದರೆ ಪದಕ ಗೆದ್ದೇ ಗೆಲ್ಲುತ್ತೇನೆ. ಆ ಪದಕ ಗೆದ್ದು ಅದನ್ನು ಬ್ರಿಜ್ ಭೂಷಣ್ ಮುಖದ ಮುಂದೆ ಹಿಡಿದು ನೋಡು ನಾನು ಪದಕ ಗೆದ್ದು ಬಂದಿದ್ದೇನೆ ಎಂದು ತೋರಿಸಬೇಕು ಎಂದು ವಿನೇಶ್ ಶಪಥ ಮಾಡಿದ್ದರು.
ಅದರ ಹಾದಿಯಲ್ಲೇ ಅವರು ಸಾಗಿದ್ದರು. ಫೈನಲ್ ವರೆಗೂ ತಲುಪಿ ಇತಿಹಾಸ ಸೃಷ್ಟಿಸಿದ್ದರು. ನಿನ್ನೆಯ ಅವರ ಪ್ರತಿ ಆಟದಲ್ಲೂ ಆ ಕಿಚ್ಚು ಕಾಣಿಸುತ್ತಿತ್ತು. ಆದರೆ ಫೈನಲ್ ನಲ್ಲಿ ಗೆದ್ದು ಚಿನ್ನ ಕೊರಳಿಗೆ ಹಾಕಿಕೊಳ್ಳಬೇಕಾದ ಅವರೀಗ ಅನರ್ಹ ಎಂಬ ಹಣೆಪಟ್ಟಿ ಹೊರಬೇಕಾಗಿದೆ. ಬಹುಶಃ ಇದೇ ಕಾರಣಕ್ಕೂ ಅವರ ಅನರ್ಹತೆ ಅವರಿಗೆ ಹೆಚ್ಚು ನೋವು ತಂದಿರಬಹುದು.