ತೂಕ ಇಳಿಸಲು ವಿನೇಶ್ ಫೋಗಟ್ ಕೂದಲು, ಉಗುರು ಕಟಾ ಕಟ್... ಕಟಾ ಕಟ್

Sampriya

ಬುಧವಾರ, 7 ಆಗಸ್ಟ್ 2024 (16:21 IST)
Photo Courtesy X
ನವದೆಹಲಿ: ಒಲಿಂಪಿಕ್ಸ್‌ನಲ್ಲಿ ಚಿನ್ನ ಅಥವಾ ಬೆಳ್ಳಿ ಪದಕದ ನಿರೀಕ್ಷೆಯಲ್ಲಿದ್ದ ಭಾರತೀಯರಿಗೆ ವಿನೇಶ್ ಫೋಗಟ್ ಅವರು ಸ್ಪರ್ಧೆಯಿಂದ ಅನರ್ಹರಾಗಿರುವ ಸುದ್ದಿ ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ. ನಿನ್ನೆ ನಡೆದ ಕ್ವಾಟರ್ ಹಾಗೂ ಸೆಮಿಫೈನಲ್‌ನಲ್ಲಿ ಜಯ ಗಳಿಸುವ ಮೂಲಕ  ಒಲಿಂಪಿಕ್ಸ್‌ ಕುಸ್ತಿ ಫೈನಲ್‌ಗೆ ಅರ್ಹತೆ ಪಡೆದ ದೇಶದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ವಿನೇಶ್ ಪಾತ್ರರಾಗಿದ್ದರು.

ಇನ್ನೂ ವಿನೇಶ್ ಫೈನಲ್ ಪ್ರವೇಶಿಸುತ್ತಿದ್ದ ಹಾಗೇ ದೇಶದಲ್ಲಿ ಸಂಭ್ರಮ ಮನೆ ಮಾಡಿತ್ತು. ಆದರೆ ಚಿನ್ನದ ಪದಕಕ್ಕೆ ಕಣಕ್ಕಿಳಿಯುವ ಮುನ್ನಾವೇ ತೂಕ ಹೆಚ್ಚಳವಾಗಿದ್ದರಿಂದ ಅವರನ್ನು ಸ್ಪರ್ಧೆಯಿಂದ ಹೊರಗಿಡಲಾಗಿದೆ.

ವಿನೇಶ್ ಅವರು ಸಾಮಾನ್ಯವಾಗಿ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸುತ್ತಾರೆ ಆದರೆ ಈ ಬಾರಿಯ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ತನ್ನ ತೂಕವನ್ನು ಕಡಿಮೆ ಮಾಡಿ 50ಕೆಜಿ ವಿಭಾಗದಲ್ಲಿ ಕಣಕ್ಕಿಳಿಯಲು ನಿರ್ಧರಿಸಿದರು. ವಿನೇಶ್ ಅವರು ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ 50ಕೆಜಿ ವಿಭಾಗದಲ್ಲಿ ಭಾಗವಹಿಸಲು ಭಾರೀ ವರ್ಕೌಟ್ ಮಾಡಿದ್ದಾರೆ. ನೈಸರ್ಗಿಕವಾಗಿ ವಿನೇಶ್ 50ಕೆಜಿ ಮೇಲ್ಪಟ್ಟಿದ್ದು, ವಿಪರೀತದ ವರ್ಕೌಟ್‌ನಿಂದಾಗಿ ತನ್ನ ತೂಕವನ್ನು 50ಕ್ಕೆ ಇಳಿಕೆ ಮಾಡಿದ್ದರು.

ವರದಿಯ ಪ್ರಕಾರ, ತನ್ನ ತೂಕವನ್ನು 50ಕೆಜಿಗೆ ಇಳಿಸಲು ತನ್ನ ಕೂದಲಿಗೂ ಕತ್ತರಿ ಹಾಕಿದ್ದಲ್ಲದೆ, ಮಾನದಂಡಗಳನ್ನು ಪೂರೈಸಲು ರಕ್ತನಾಳಗಳಿಂದ ಸ್ವಲ್ಪ ರಕ್ತವನ್ನು ಹೊರತೆಗೆಯಲು ಪ್ರಯತ್ನಿಸಿದರು. ಆದರೂ, ಪ್ರಯತ್ನಗಳು ಅವಳು ಬಯಸಿದ ಫಲಿತಾಂಶವನ್ನು ತರಲಿಲ್ಲ. ಬೆವರು ಬರಿಸಲು ಸೈಕ್ಲಿಂಗ್ ವ್ಯಾಯಾಮವನ್ನು ಮಾಡಿದರು ಅದು ಅವರಿಗೆ ಹೆಚ್ಚೇನು ಸಹಾಯ ಮಾಡಿಲ್ಲ.

ನಿನ್ನೆ ನಡೆದ ಸೆಮಿಫೈನಲ್ ಸ್ಪರ್ಧೆಯ ಬಳಿಕ  ರಾತ್ರಿ ಆಕೆಯ ತೂಕ 1 ಕೆಜಿಯಷ್ಟು ಹೆಚ್ಚಾದ ನಂತರ ವಿನೇಶ್ ಇಂತಹ ತೀವ್ರವಾದ ಕ್ರಮಗಳನ್ನು ತೆಗೆದುಕೊಂಡರು ಎಂದು ಮೂಲಗಳಿಂದ ತಿಳಿದುಬಂದಿದೆ. 900 ಗ್ರಾಂ ತೂಕವನ್ನು ಇಳಿಸುವಲ್ಲಿ ಯಶಸ್ವಿಯಾದಳು ಆದರೆ ಕೊನೆಯ 100 ಗ್ರಾಂ ತೂಕವನ್ನು ಇಳಿಸುವಲ್ಲಿ ಸೋತಿದ್ದರಿಂದ ಸ್ಪರ್ಧೆಯಿಂದ ಅನರ್ಹರಾಗಿದ್ದಾರೆ.




ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ