ಮೆಕ್ಸಿಕೊದಲ್ಲಿ ಸೌಹಾರ್ದ ಪಂದ್ಯವಾಡುವಾಗ ಆಟಗಾರರ ಹೊಟೆಲ್ ಕೋಣೆಯಿಂದ ನಗದು ಮತ್ತು ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಕಳ್ಳತನ ಮಾಡಲಾಗಿದೆ ಎಂದು ಅರ್ಜಂಟೈನಾ ಒಲಿಂಪಿಕ್ ಫುಟ್ಬಾಲ್ ತಂಡವು ಶುಕ್ರವಾರ ದೂರು ನೀಡಿದೆ. ಮೆಕ್ಸಿಕೊ ಮತ್ತು ದಕ್ಷಿಣ ಅಮೆರಿಕಾ ತಂಡ ಅರ್ಜಂಟೈನಾ ಗುರುವಾರ ರಾತ್ರಿ ಆಡಿದ ಪಂದ್ಯ 0-0ಯಿಂದ ಡ್ರಾ ಆದ ಬಳಿಕ ಈ ಕಳ್ಳತನ ನಡೆದಿದೆ ಎಂದು ಅರ್ಜಂಟೈನಾ ಫುಟ್ಬಾಲ್ ಸಂಸ್ಥೆಯ ಉಪಾಧ್ಯಕ್ಷ ಕ್ಲಾಡಿಯೊ ತಾಪಿಯಾ ತಿಳಿಸಿದ್ದಾರೆ.
ನಾವು ರಾತ್ರಿ 11.40ಕ್ಕೆ ವಾಪಸು ಬಂದು ಕೋಣೆಗಳಿಗೆ ತೆರಳಿದಾಗ, ನಮ್ಮ ಹಣ, ನಗದನ್ನು ದರೋಡೆ ಮಾಡಿದ್ದು ನಮಗೆ ಅರಿವಾಯಿತು ಎಂದು ತಾಪಿಯಾ ಹೇಳಿದ್ದಾರೆ. ಎಎಫ್‌ಎ, ಕ್ಯಾಮಿನೊ ರಿಯಲ್ ಹೊಟೆಲ್ ಮತ್ತು ವಿಮಾ ಸಂಸ್ಥೆ ನಡುವೆ ಅರ್ಜಂಟೈನಾ ನಿಯೋಗಕ್ಕೆ ಪರಿಹಾರ ನೀಡುವುದಕ್ಕೆ ಸಂಬಂಧಿಸಿದಂತೆ ಅಂತಿಮವಾಗಿ ಒಪ್ಪಂದ ಏರ್ಪಟ್ಟಿದೆ ಎಂದು ಮೆಕ್ಸಿಕನ್ ಫುಟ್ಬಾಲ್ ಒಕ್ಕೂಟ ಹೇಳಿಕೆಯಲ್ಲಿ ತಿಳಿಸಿದೆ.