ನವದೆಹಲಿ: ಭಾರತ ಕಂಡ ಶ್ರೇಷ್ಠ ಫುಟ್ಬಾಲಿಗರಲ್ಲಿ ಒಬ್ಬರಾದ ಸುನಿಲ್ ಛೆಟ್ರಿ ಅಂತಾರಾಷ್ಟ್ರೀಯ ವೃತ್ತಿ ಜೀವನಕ್ಕೆ ವಿದಾಯ ಘೋಷಿಸಿದ್ದಾರೆ. ಕುವೈತ್ ವಿರುದ್ಧ ಜೂನ್ 6 ರಂದು ನಡೆಯಲಿರುವ ವಿಶ್ವಕಪ್ ಅರ್ಹತಾ ಪಂದ್ಯ ಅವರ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಗಿರಲಿದೆ.
ರಾಷ್ಟ್ರೀಯ ತಂಡದ ನಾಯಕರಾಗಿರುವ ಸುನಿಲ್ ಛೆಟ್ರಿ ಈ ವಿಚಾರವನ್ನು ಇಂದು ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಪೋಸ್ಟ್ ಮಾಡುವ ಮೂಲಕ ಪ್ರಕಟಿಸಿದ್ದಾರೆ. ಅವರ ನಿವೃತ್ತಿಯ ಸುದ್ದಿ ತಿಳಿಯುತ್ತಿದ್ದಂತೇ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದರ ಜೊತೆಗೆ ಶುಭ ಹಾರೈಕೆ ತಿಳಿಸಿದ್ದಾರೆ.
ಛೆಟ್ರಿ ಭಾರತದ ಪರವಾಗಿ 145 ಪಂದ್ಯಗಳನ್ನು ಆಡಿದ್ದಾರೆ. 20 ವರ್ಷ ಭಾರತದ ಪರವಾಗಿ ಆಡಿ 93 ಗೋಲು ಗಳಿಸಿದ್ದಾರೆ. ಭಾರತದಲ್ಲಿ ಫುಟ್ಬಾಲ್ ಎಲ್ಲಾ ಕಡೆ ಜನಪ್ರಿಯವಾಗಿಲ್ಲ. ಆದರೆ ಫುಟ್ಬಾಲ್ ನ ಕೆಲವೇ ಕೆಲವು ಸ್ಟಾರ್ ಗಳಲ್ಲಿ ಸುನಿಲ್ ಛೆಟ್ರಿ ಕೂಡಾ ಒಬ್ಬರು ಎನ್ನಬಹುದು.
ಸುದೀರ್ಘವಾಗಿ ನಿವೃತ್ತಿ ಬಗ್ಗೆ ಮಾತನಾಡಿರುವ ಸುನಿಲ್ ಛೆಟ್ರಿ ವಯಸ್ಸಾಯ್ತು, ಸುಸ್ತಾಗಿದ್ದೇನೆ ಎಂದು ನಿವೃತ್ತಿ ಘೋಷಿಸುತ್ತಿಲ್ಲ. ನನ್ನ ಒಳ ಮನಸ್ಸು ಇನ್ನು ಸಾಕು ಎನ್ನುತ್ತಿದೆ. ಅದಕ್ಕಾಗಿ ನಿವೃತ್ತಿ ಘೋಷಿಸುತ್ತಿದ್ದೇನೆ ಎಂದಿದ್ದಾರೆ. ತನ್ನ ಕುಟುಂಬದವರ ಜೊತೆ ಚರ್ಚಿಸಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಹೇಳಿದ್ದಾರೆ. ಅಲ್ಲದೆ ತಮ್ಮ 19 ವರ್ಷದ ಸುಂದರ ವೃತ್ತಿ ಬದುಕಿನ ಬಗ್ಗೆ ಸುದೀರ್ಘವಾಗಿ ಮಾತನಾಡಿ ಧನ್ಯವಾದ ಸಲ್ಲಿಸಿದ್ದಾರೆ.