ಕಾಮನ್ ವೆಲ್ತ್ ಗೇಮ್ಸ್: ಬ್ಯಾಡ್ಮಿಂಟನ್, ಟಿಟಿಯಲ್ಲಿ ಚಿನ್ನ, ಹಾಕಿಯಲ್ಲಿ ಬೆಳ್ಳಿ
ಸೋಮವಾರ, 8 ಆಗಸ್ಟ್ 2022 (20:28 IST)
ಬರ್ಮಿಂಗ್ ಹ್ಯಾಮ್: ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಬ್ಯಾಡ್ಮಿಂಟನ್ ಮಹಿಳೆಯರ ಮತ್ತು ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಚಿನ್ನ ಪಡೆದ ಭಾರತ ಪುರುಷರ ಡಬಲ್ಸ್ ನಲ್ಲೂ ಬಂಗಾರ ಪದಕ ಕೊರಳಿಗೇರಿಸಿಕೊಂಡಿದೆ. ಜೊತೆಗೆ ಟೇಬಲ್ ಟೆನಿಸ್ ನಲ್ಲಿ ಭಾರತದ ಶರತ್ ಕಮಲ್ ಸಿಂಗಲ್ಸ್ ನಲ್ಲೂ ಚಿನ್ನ ಗೆದ್ದಿದ್ದಾರೆ.
ಶರತ್ ಕಮಲ್-ಜ್ಞಾನಶೇಖರನ್ ಜೋಡಿ ಡಬಲ್ಸ್ ನಲ್ಲಿ ನಿನ್ನೆ ಚಿನ್ನ ಗೆದ್ದುಕೊಂಡಿತ್ತು. ಇದೀಗ ಸಿಂಗಲ್ಸ್ ವಿಭಾಗದಲ್ಲೂ ಶರತ್ ಫೈನಲ್ ಗೆದ್ದು ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಇನ್ನು, ಬ್ಯಾಡ್ಮಿಂಟನ್ ನಲ್ಲಿ ಪಿ.ವಿ. ಸಿಂಧು, ಲಕ್ಷ್ಯ ಸೇನ್ ಬಳಿಕ ಪುರುಷರ ಡಬಲ್ಸ್ ನಲ್ಲಿ ಚಿರಾಗ್ ಶೆಟ್ಟಿ-ಸಾತ್ವಿಕ್ ಜೋಡಿ ಫೈನಲ್ ಗೆದ್ದು ಚಿನ್ನದ ಪದಕ ತಮ್ಮದಾಗಿಸಿಕೊಂಡಿತು.
ಆದರೆ ಪುರುಷರ ಹಾಕಿ ಫೈನಲ್ ನಲ್ಲಿ ಭಾರತ ನಿರಾಸೆ ಅನುಭವಿಸಿತು. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಭಾರತ 0-7 ಅಂತರದಿಂದ ಸೋತು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿತು.
ಒಟ್ಟಾರೆ ಕೊನೆಯ ದಿನವಾದ ಇಂದು ಭಾರತ ನಾಲ್ಕು ಚಿನ್ನದ ಪದಕಗಳೊಂದಿಗೆ ಅಂಕಪಟ್ಟಿಯಲ್ಲಿ ಒಟ್ಟು 22 ಚಿನ್ನ, 16 ಬೆಳ್ಳಿ ಮತ್ತು 23 ಕಂಚಿನ ಪದಕದೊಂದಿಗೆ 61 ಪದಕ ಗೆದ್ದು ಈ ಕಾಮನ್ ವೆಲ್ತ್ ಗೇಮ್ಸ್ ಗೆ ವಿದಾಯ ಹೇಳಿತು.