ಏಷ್ಯನ್ ಗೇಮ್ಸ್ ಜ್ಯಾವೆಲಿನ್ ಥ್ರೋ: ಭಾರತದ ‘ಚಿನ್ನ’ ನೀರಜ್ ಚೋಪ್ರಾ, ಕಿಶೋರ್ ಗೆ ಬೆಳ್ಳಿ
ಬುಧವಾರ, 4 ಅಕ್ಟೋಬರ್ 2023 (18:34 IST)
Photo Courtesy: Twitter
ಹ್ಯಾಂಗ್ ಝೂ: ಏಷ್ಯನ್ ಗೇಮ್ಸ್ ನ ಜ್ಯಾವೆಲಿನ್ ಥ್ರೋ ವಿಭಾಗದಲ್ಲಿ ಭಾರತದ ಗೋಲ್ಡನ್ ಬಾಯ್ ನೀರಜ್ ಚೋಪ್ರಾ ಚಿನ್ನ ಗೆದ್ದರೆ ಮತ್ತೊಬ್ಬ ಭಾರತೀಯ ಕಿಶೋರ್ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದಾರೆ.
ಸ್ಪರ್ಧೆಯುದ್ದಕ್ಕೂ ನೀರಜ್ ಮತ್ತು ಕಿಶೋರ್ ನಡುವೆ ತೀವ್ರ ಪೈಪೋಟಿಯಿತ್ತು. ವಿಶೇಷವೆಂದರೆ ಪರಸ್ಪರ ಆಟಗಾರರು ಒಬ್ಬರನ್ನೊಬ್ಬರು ಹುರಿದುಂಬಿಸುತ್ತಾ ಆಡುತ್ತಿದ್ದರು. ಈ ನಡುವೆ ಕಿಶೋರ್ ಎಸೆತವೊಂದನ್ನು ಫೌಲ್ ಮಾಡಿದಾಗ ನೀರಜ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಅನ್ಯಾಯವಾಗದಂತೆ ತಡೆದರು. ಒಂದು ಹಂತದಲ್ಲಿ ಕಿಶೋರ್ ನೀರಜ್ ರನ್ನು ಹಿಂದಿಕ್ಕಿ ನಂ. ಸ್ಥಾನದಲ್ಲಿದ್ದರು.
ಆದರೆ ನೀರಜ್ ಅನುಭವದ ಮುಂದೆ ಕಿಶೋರ್ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. 88.88 ಮೀ. ದೂರವೆಸೆದ ನೀರಜ್ ಚಿನ್ನ ಗೆದ್ದರೆ ಜೀವನಶ್ರೇಷ್ಠ 87.54 ಮೀ. ದೂರ ಎಸೆದ ಕಿಶೋರ್ ಬೆಳ್ಳಿ ತಮ್ಮದಾಗಿಸಿಕೊಂಡರು.
ಇನ್ನು ಬಾಕ್ಸಿಂಗ್ ನಲ್ಲಿ ಇಂದು ಭಾರತದ ಮಹಿಳಾ ತಾರೆ ಲೊವ್ಲಿನಾ ಬೆಳ್ಳಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಆದರೆ ಮಹಿಳೆಯ 800 ಮೀ. ನಲ್ಲಿ ಹರ್ಮಿಲನ್ ಬೈನ್ಸ್ ಬೆಳ್ಳಿ, 5000 ಮೀ. ಫೈನಲ್ ನಲ್ಲಿ ಎರಡನೆಯವರಾಗಿ ಸ್ಪರ್ಧೆ ಮುಗಿಸಿದ ಅವಿನಾಶ್ ಸಾಬ್ಲೆ ಬೆಳ್ಳಿ, ಮಹಿಳೆಯರ ರಿಲೇ ತಂಡ ಬೆಳ್ಳಿ ಪದಕ ಗೆದ್ದುಕೊಂಡಿದೆ. ಪುರುಷರ ಹಾಕಿ ತಂಡ ಫೈನಲ್ ಪ್ರವೇಶಿಸಿದೆ. ಇದೀಗ ಭಾರತ ಒಟ್ಟಾರೆ 83 ಪದಕ ಗೆದ್ದುಕೊಂಡಂತಾಗಿದೆ.