ಬೆಳ್ಳಿ ಗೆದ್ದ ರವಿಕುಮಾರ್ ನೋಡಿ ಜೈಲಿನಲ್ಲೇ ಭಾವುಕರಾದ ಸುಶೀಲ್ ಕುಮಾರ್
ಶುಕ್ರವಾರ, 6 ಆಗಸ್ಟ್ 2021 (09:57 IST)
ನವದೆಹಲಿ: ಟೋಕಿಯೋ ಒಲಿಂಪಿಕ್ಸ್ ನಲ್ಲಿ ಪುರುಷರ 57 ಕೆ.ಜಿ. ಫ್ರೀಸ್ಟೈಲ್ ಕುಸ್ತಿ ವಿಭಾಗದಲ್ಲಿ ಫೈನಲ್ ತಲುಪಿ ಬೆಳ್ಳಿ ಗೆದ್ದ ಭಾರತದ ರವಿಕುಮಾರ್ ಸಾಧನೆಯನ್ನು ನೋಡಿ ಇದೀಗ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಕುಸ್ತಿಪಟು ಸುಶೀಲ್ ಕುಮಾರ್ ಭಾವುಕರಾದ ಘಟನೆ ನಡೆದಿದೆ.
ಸುಶೀಲ್ ಸದ್ಯಕ್ಕೆ ತಿಹಾರ್ ಜೈಲಿನಲ್ಲಿದ್ದು, ಅಧಿಕಾರಿಗಳಿಗೆ ಮನವಿ ಮಾಡಿ ಒಲಿಂಪಿಕ್ಸ್ ಪಂದ್ಯಗಳನ್ನು ನೋಡಲೆಂದೇ ಟಿ.ವಿ. ವ್ಯವಸ್ಥೆ ಪಡೆದುಕೊಂಡಿದ್ದಾರೆ. ಇತರ ಖೈದಿಗಳೊಂದಿಗೆ ಒಲಿಂಪಿಕ್ ಪಂದ್ಯಗಳನ್ನು ಆಸಕ್ತಿಯಿಂದ ನೋಡುವ ಸುಶೀಲ್ ಕುಮಾರ್ ತಮ್ಮ ದಾಖಲೆ ಮುರಿದ ರವಿಕುಮಾರ್ ಪಂದ್ಯವನ್ನು ವೀಕ್ಷಿಸಿದ್ದರು. ಅಲ್ಲದೆ ರವಿಕುಮಾರ್ ಗೆ ಚಿಯರ್ ಮಾಡುತ್ತಿದ್ದ ಸುಶೀಲ್ ಕೊನೆಗೆ ಅವರು ಬೆಳ್ಳಿ ಪದಕ ಗೆದ್ದಾಗ ಭಾವುಕರಾದರು ಎಂದು ತಿಳಿದುಬಂದಿದೆ.
ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತ ಸುಶೀಲ್, ಇದುವರೆಗೆ ಭಾರತದ ಪರ ಒಲಿಂಪಿಕ್ಸ್ ನಲ್ಲಿ ಫೈನಲ್ ತಲುಪಿದ ಏಕೈಕ ಕುಸ್ತಿಪಟುವಾಗಿದ್ದರು. ಇದೀಗ ರವಿಕುಮಾರ್ ಕೂಡಾ ಅದೇ ಸಾಧನೆ ಮಾಡಿದ್ದಾರೆ. ಆದರೆ ಒಲಿಂಪಿಕ್ಸ್ ನಲ್ಲಿ ವೈಯಕ್ತಿಕ ವಿಭಾಗದಲ್ಲಿ ಎರಡು ಪದಕ ಗೆದ್ದ ಏಕೈಕ ಪುರುಷ ಭಾರತೀಯ ಕ್ರೀಡಾಳು ಎಂಬ ದಾಖಲೆ ಈಗಲೂ ಸುಶೀಲ್ ಹೆಸರಿನಲ್ಲಿಯೇ ಉಳಿದುಕೊಂಡಿದೆ.