ಆಸ್ಟ್ರೇಲಿಯಾಕ್ಕೆ ಸ್ಕಾಟ್ಲೆಂಡ್ ವಿರುದ್ಧ ರೋಚಕ ಜಯ: ಸೂಪರ್‌ ಎಂಟರ ಘಟ್ಟಕ್ಕೆ ಇಂಗ್ಲೆಂಡ್‌

Sampriya

ಭಾನುವಾರ, 16 ಜೂನ್ 2024 (10:56 IST)
Photo Courtesy X
ಅಮೆರಿಕ: ಆಸ್ಟ್ರೇಲಿಯಾ ತಂಡವು ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಇಂದು ಸ್ಕಾಟ್ಲೆಂಡ್ ವಿರುದ್ಧ ಐದು ವಿಕೆಟ್ ಅಂತರದ ರೋಚಕ ಗೆಲುವು ದಾಖಲಿಸಿದೆ. ಈ ಸೋಲಿನೊಂದಿಗೆ ಸ್ಕಾಟ್ಲೆಂಡ್‌ ಟೂರ್ನಿಯಿಂದ ಹೊರಬಿದ್ದರೆ, ಹಾಲಿ ಚಾಂಪಿಯನ್‌ ಇಂಗ್ಲೆಂಡ್‌ ತಂಡವು ಸೂಪರ್‌ ಎಂಟರ ಘಟ್ಟಕ್ಕೆ ಪ್ರವೇಶ ಪಡೆದಿದೆ.

181 ರನ್‌ಗಳ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ಕೊನೆಯ ಓವರ್‌ನಲ್ಲಿ ಎರಡು ಎಸೆತಗಳು ಬಾಕಿ ಉಳಿದಿರುವಂತೆಯೇ ಐದು ವಿಕೆಟ್ ನಷ್ಟಕ್ಕೆ ಗುರಿ ತಲುಪಿ ಪ್ರಯಾಸದ ಗೆಲುವು ದಾಖಲಿಸಿತು.


'ಬಿ' ಗುಂಪಿನಲ್ಲಿ ಎಲ್ಲ ನಾಲ್ಕು ಪಂದ್ಯಗಳಲ್ಲಿ ಜಯ ಸಾಧಿಸಿರುವ ಆಸ್ಟ್ರೇಲಿಯಾ ಒಟ್ಟು ಎಂಟು ಅಂಕಗಳನ್ನು ಕಲೆ ಹಾಕಿದ್ದು, ಅಗ್ರಸ್ಥಾನಿಯಾಗಿ ಮುಂದಿನ ಹಂತಕ್ಕೆ ಪ್ರವೇಶಿಸಿದೆ. ಇಂಗ್ಲೆಂಡ್ ಹಾಗೂ ಸ್ಕಾಟ್ಲೆಂಡ್ ಸಮಾನ ಐದು ಅಂಕಗಳನ್ನು ಪಡೆದಿವೆ. ಆದರೆ ಸ್ಕಾಟ್ಲೆಂಡ್‌ಗಿಂತಲೂ ಉತ್ತಮ ರನ್‌ರೇಟ್ ಕಾಯ್ದುಕೊಂಡಿರುವ ಇಂಗ್ಲೆಂಡ್‌ ಮುಂದಿನ ಹಂತಕ್ಕೆ ತೇರ್ಗಡೆ ಹೊಂದಿದೆ.  

ಮೊದಲು ಬ್ಯಾಟಿಂಗ್ ನಡೆಸಿದ ಸ್ಕಾಟ್ಲೆಂಡ್ ಬ್ರಂಡನ್ ಮೆಕುಲೆನ್ (60) ಹಾಗೂ ನಾಯಕ ಬೆರಿಂಗ್ಟನ್ (42*) ಬಿರುಸಿನ ಆಟದ ನೆರವಿನಿಂದ ಐದು ವಿಕೆಟ್ ನಷ್ಟಕ್ಕೆ 180 ರನ್‌ಗಳ ಸವಾಲನ ಮೊತ್ತ ಪೇರಿಸಿತ್ತು. ಟ್ರಾವಿಸ್ ಹೆಡ್ (68) ಹಾಗೂ ಸ್ಟೋಯಿನಿಸ್ ( 59) ಅವರ ಆಟದ ಬಲದಿಂದ ಆಸ್ಟ್ರೇಲಿಯಾ ಗೆಲುವು ಸಾಧಿಸಿತು.

ಇದಕ್ಕೂ ಮೊದಲು ಮಳೆ ಬಾಧಿತ ಪಂದ್ಯದಲ್ಲಿ ಡಕ್ವರ್ಥ್ ಲೂಯಿಸ್ ನಿಯಮದಡಿಯಲ್ಲಿ ಇಂಗ್ಲೆಂಡ್ ತಂಡವು ನಮೀಬಿಯಾ ವಿರುದ್ಧ 41 ರನ್ ಅಂತರದ ಗೆಲುವು ದಾಖಲಿಸಿ, ಸೂಪರ್‌ ಎಂಟರ ಪ್ರವೇಶದ ಕನಸನ್ನು ಜೀವಂತವಾಗಿರಿಸಿಕೊಂಡಿತ್ತು. ಈ ಪಂದ್ಯದ ಮಳೆಯಿಂದ ರದ್ದಾಗಿದ್ದರೆ ಇಂಗ್ಲೆಂಡ್‌ ತಂಡ ಟೂರ್ನಿಯಿಂದ ಹೊರಬೀಳುವ ಆತಂಕ ಎದುರಿಸಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ