ಧೋನಿ ಪರಿಸ್ಥಿತಿ ಕಂಡು ಮರುಗಿದ ಗ್ರೇಮ್ ಸ್ಮಿತ್

ಮಂಗಳವಾರ, 16 ಜೂನ್ 2009 (13:01 IST)
ನಾಯಕನಾಗಿ ಇಂತಹ ಪರಿಸ್ಥಿತಿಗಳನ್ನು ನಾನು ಕೂಡ ಎದುರಿಸಿದ್ದೇನೆ; ನಾವಂದುಕೊಂಡದ್ದು ನಡೆಯದಿರುವಾಗ ಇತರರು ಮುಗಿಬೀಳುವುದು ಸಾಮಾನ್ಯ ಎಂದು ಹೇಳುವ ಮೂಲಕ ಟ್ವೆಂಟಿ-20 ವಿಶ್ವಕಪ್‌ನಿಂದ ಹೊರಬಿದ್ದು ಸಂಕಷ್ಟದಲ್ಲಿರುವ ಟೀಮ್ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿಯವರಿಗೆ ದಕ್ಷಿಣ ಆಫ್ರಿಕಾ ಕಪ್ತಾನ ಗ್ರೇಮ್ ಸ್ಮಿತ್ ಬೆಂಬಲ ವ್ಯಕ್ತಪಡಿಸಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಭಾನುವಾರದ ಪಂದ್ಯದಲ್ಲಿ ಮೂರು ರನ್ನುಗಳ ಅಂತರದಿಂದ ಸೋಲುಂಡ ಭಾರತ ತಂಡದ ನಾಯಕನ ತಂತ್ರಗಳಿಗೆ ದೇಶದ ಕ್ರಿಕೆಟ್ ಅಭಿಮಾನಿಗಳು, ಮಾಜಿ ಕ್ರಿಕೆಟ್ ಆಟಗಾರರು ತೀವ್ರ ಟೀಕೆ ಮಾಡಿದ್ದರು.

"ಮಹೇಂದ್ರ ಸಿಂಗ್ ಧೋನಿಯವರು ಲೆಕ್ಕಾಚಾರದ ಮನುಷ್ಯ. ಆದರೆ ಅವರ ಕೆಲವು ತಂತ್ರಗಳು ತೀವ್ರ ವಿಮರ್ಶೆಗೊಳಗಾದುವು. ಇದರ ಜತೆ ನಾಯಕನಾದವನು ಏಗುವುದು ಕಷ್ಟದ ವಿಚಾರ" ಎಂದು ಟ್ರೆಂಟ್ ಬ್ರಿಡ್ಜ್‌ನಲ್ಲಿ ಸೂಪರ್ ಎಂಟರ ಕೊನೆಯ ಪಂದ್ಯದಲ್ಲಿ ಮಂಗಳವಾರ ಎದುರಾಗಲಿರುವ ತಂಡದ ನಾಯಕ ಸ್ಮಿತ್ ಮಾತನಾಡುತ್ತಾ ತಿಳಿಸಿದ್ದಾರೆ.

"ನೀವು ಸುದೀರ್ಘ ಕಾಲ ತಂಡದ ನಾಯಕನಾಗಿದ್ದಾಗ ಇಂತಹ ಪರಿಸ್ಥಿತಿಗಳನ್ನು ದಾಟಿ ಬರಬೇಕಾಗುತ್ತದೆ. ಒಬ್ಬ ನಾಯಕನಾಗಿ ತಾನು ಮಾಡಿದ ತಂತ್ರಗಳು ಫಲಿಸದಿದ್ದಾಗ ಉಳಿದವರು ನಿಮ್ಮ ಮೇಲೆ ಮುಗಿ ಬೀಳುತ್ತಾರೆ. ನೀವು ಸ್ವತಃ ನಿಮ್ಮನ್ನು ಮತ್ತು ಪರಿಸ್ಥಿತಿಯನ್ನು ನಿಭಾಯಿಸುವುದು ನಿಮ್ಮ ವ್ಯಕ್ತಿತ್ವದ ಬಗೆಯನ್ನು ಬಿಂಬಿಸುತ್ತದೆ ಮತ್ತು ನಿಮ್ಮ ಕ್ರೀಡಾಜೀವನದ ದಿಕ್ಕನ್ನು ಕೂಡ ಸ್ಪಷ್ಟಪಡಿಸುತ್ತದೆ" ಎಂದು ಅರ್ಥಗರ್ಭಿತವಾಗಿ ನುಡಿದರು.

"ಇಂತಹ ಕೆಲವು ಪರಿಸ್ಥಿತಿಗಳನ್ನು ನಾನು ಕೂಡ ಎದುರಿಸಿದ್ದೇನೆ. ಆದರೆ ಈ ಟೂರ್ನಮೆಂಟ್‌ನಲ್ಲಿ ಅಂತಹ ಪರಿಸ್ಥಿತಿ ಎದುರಾಗದು ಎಂಬ ಭರವಸೆ ನನಗಿದೆ. ಬಹುಶಃ ಅದು ಮತ್ತೊಬ್ಬರ ಸೋಲಾಗಿರುತ್ತದೆ" ಎಂದು ಸ್ಮಿತ್ ತನ್ನ ಅನುಭವ ಹಾಗೂ ವಿಶ್ವಾಸಗಳನ್ನು ಮಿಲಿತಗೊಳಿಸಿದ್ದಾರೆ.

ಮತ್ತೂ ಮಾತು ಮುಂದುವರಿಸಿದ ಅವರು, "ಭಾರತವು ಹಲವು ಆಯ್ಕೆಗಳ ಪ್ರತಿಭಾವಂತರ ತಂಡ ಎಂಬುದು ನಮಗೆಲ್ಲಾ ತಿಳಿದೇ ಇದೆ. ಆದರೆ ತಮ್ಮ ಗುಣಮಟ್ಟದ ಪ್ರದರ್ಶನವನ್ನು ದುರದೃಷ್ಟಕರವಾಗಿ ಅವರಿಗೆ ಸೂಪರ್ ಎಂಟರಲ್ಲಿ ನೀಡಲಾಗದಿರುವುದು ಆಘಾತಕಾರಿ ವಿಚಾರ" ಎಂದರು.

ಈಗಾಗಲೇ ಸೆಮಿಫೈನಲ್ ಪ್ರವೇಶಿಸಿರುವ ದಕ್ಷಿಣ ಆಫ್ರಿಕಾ 'ಇ' ಗುಂಪಿನ ವಿಜೇತರೆದುರು ಗುರುವಾರ ಫೈನಲ್‌ಗಾಗಿ ಹೋರಾಟ ನಡೆಸುವುದು ಬಹುತೇಕ ಖಚಿತ.

"ಮಂಗಳವಾರದ ಪಂದ್ಯ ಔಪಚಾರಿಕವೆನಿಸಿದರೂ ನಾವು ಉತ್ತಮವಾಗಿ ಆಡುವ ಮೂಲಕ ಗೆಲುವಿನ ವಾತಾವರಣವನ್ನು ಉಳಿಸಿಕೊಳ್ಳುತ್ತೇವೆ. ಇದರಿಂದ ಸೆಮಿಫೈನಲ್ ಹೋರಾಟಕ್ಕೆ ಬೆಂಬಲ ವ್ಯಕ್ತವಾಗುತ್ತದೆ" ಎಂದರು.

"ನಾವೀಗ ಗಳಿಸಿರುವ ಗುಣಮಟ್ಟದ ಆಟವನ್ನು ಉಳಿಸಿಕೊಳ್ಳುವುದು ಪ್ರಮುಖ ಸವಾಲು. ಹಾಗಾಗಿ ನಮಗಿದು ಪ್ರಮುಖ ಪಂದ್ಯ" ಎಂದು ಇದೇ ಸಂದರ್ಭದಲ್ಲಿ ಸ್ಮಿತ್ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ