ಮೇಘಸ್ಫೋಟಕ್ಕೆ 17 ಬಲಿ!

ಗುರುವಾರ, 29 ಜುಲೈ 2021 (09:29 IST)
ಜಮ್ಮು/ಶಿಮ್ಲಾ(ಜು.29): ಜಮ್ಮು-ಕಾಶ್ಮೀರ, ಲಡಾಖ್, ಹಿಮಾಚಲ ಪ್ರದೇಶದಲ್ಲಿ ಬುಧವಾರ ಮೇಘಸ್ಫೋಟವಾಗಿದ್ದು, 17 ಜನರು ಬಲಿಯಾಗಿದ್ದಾರೆ. ಕಾಶ್ಮೀರದಲ್ಲಿ 8 ಹಾಗೂ ಹಿಮಾಚಲದಲ್ಲಿ 9 ಜನ ಅಸುನೀಗಿದ್ದಾರೆ. ಪವಿತ್ರ ಅಮರನಾಥ ಗುಹೆ ಸನಿಹವೂ ಮೇಘಸ್ಫೋಟ ಸಂಭವಿಸಿದ್ದು, ಯಾತ್ರೆಯ ಸಮಯ ಇದಾಗಿರದ ಕಾರಣ ಯಾವುದೇ ಸಾವು-ನೋವು ವರದಿ ಆಗಿಲ್ಲ.

ಘಟನೆ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಸಾಧ್ಯವಿರುವ ಎಲ್ಲಾ ನೆರವಿನ ಭರವಸೆ ನೀಡಿದ್ದಾರೆ. ಮತ್ತೊಂದೆಡೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಜನರಲ್ ಮನೋಜ್ ಸಿನ್ಹಾ ಅವರೊಂದಿಗೆ ಮಾತುಕತೆ ನಡೆಸಿ ಪರಿಸ್ಥಿತಿಯ ಪರಾಮರ್ಶೆ ನಡೆಸಿದ್ದಾರೆ.
ಕಾಶ್ಮೀರದಲ್ಲಿ:
ಕಿಶ್್ತವಾರ್ ಜಿಲ್ಲೆಯ ಕುಗ್ರಾಮ ಹೊನ್ಜಾರ್ ಎಂಬಲ್ಲಿ ಬುಧವಾರ ಬೆಳಗಿನ ಜಾವ 4.30ರ ವೇಳೆಗೆ ಎರಡು ಮೇಘಸ್ಪೋಟ ಸಂಭವಿಸಿದೆ. ಘಟನೆಯಲ್ಲಿ 8 ಜನರು ಸಾವನ್ನಪ್ಪಿದ್ದರು, 17 ಜನರು ಗಾಯಗೊಂಡಿದ್ದಾರೆ. ಈ ಪೈಕಿ 5 ಜನರ ಸ್ಥಿತಿ ಗಂಭೀರವಾಗಿದೆ. ಇನ್ನೊಂದೆಡೆ ನಾಪತ್ತೆಯಾದ 14 ಜನರ ಪತ್ತೆಗಾಗಿ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದೆ.
ಆದರೆ ಪ್ರತಿಕೂಲ ಪರಿಣಾಮದಿಂದಾಗಿ ಹೆಚ್ಚಿನ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ತೆರಳುವುದಕ್ಕೆ ಅಡ್ಡಿಯಾಗಿದೆ. ಘಟನೆಯಲ್ಲಿ 6 ಮನೆ, ಒಂದು ಪಡಿತರ ಅಂಗಡಿ ಮತ್ತು ಒಂದು ಸೇತುವೆಗೆ ಹಾನಿಯಾಗಿದೆ. ಅಲ್ಲದೆ ಕಣಿವೆ ಪ್ರದೇಶಗಳಲ್ಲಿ ಪ್ರವಾಹ ಕಾಣಿಸಿಕೊಂಡಿದೆ.
ಹಿಮಾಚಲದಲ್ಲಿ:
ಹಿಮಾಚಲಪ್ರದೇಶದಲ್ಲಿ ಬುಧವಾರ ಸುರಿದ ಭಾರೀ ಮಳೆಯಿಂದಾಗಿ ಹಲವೆಡೆ ದಿಢೀರ್ ಪ್ರವಾಹ ಕಾಣಿಸಿಕೊಂಡಿದೆ. ಪರಿಣಾಮ ಕುಲು ಜಿಲ್ಲೆಯಲ್ಲಿ 4, ಚಂಬಾದಲ್ಲಿ ಒಬ್ಬರು ಮತ್ತು ಲಾಹುಲ್-ಸ್ಪಿಟಿಯಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಜೊತೆಗೆ ಲಾಹುಲ್ನಲ್ಲಿ 7 ಜನರು ನಾಪತ್ತೆಯಾಗಿದ್ದಾರೆ. ಘಟನಾ ಸ್ಥಳಕ್ಕೆ ನೆರವಿಗಾಗಿ ಐಟಿಬಿಪಿಯ ತಂಡವೊಂದನ್ನು ರವಾನಿಸಲಾಗಿದೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ