60 ವರ್ಷಗಳಲ್ಲೇ ಇದೇ ಮೊದಲ ಬಾರಿಗೆ ಚೀನಾದ ಜನಸಂಖ್ಯೆಯಲ್ಲಿ ಗಮನಾರ್ಹ ಪ್ರಮಾಣದಲ್ಲಿ ಇಳಿಕೆ ಆಗಿದೆ. ಈ ಬೆಳವಣಿಗೆ ನಾನಾ ನೆಲೆಗಟ್ಟಿನಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಮುಂದೆ ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ರಾಷ್ಟ್ರ ಯಾವುದು ಆಗಲಿದೆ ಎಂಬ ಪ್ರಶ್ನೆ ಮೂಡಿದ್ದು, ವಿಶ್ಲೇಷಣೆಗಳ ಪ್ರಕಾರ ಆ ಸ್ಥಾನವನ್ನು ಭಾರತ ಅಲಂಕರಿಸಲಿದೆ. ಈಗ ಇಡೀ ಜಗತ್ತಿನ ಕಣ್ಣು ಭಾರತದ ಮೇಲೆ ನೆಟ್ಟಿದೆ.
ಕಳೆದ ವರ್ಷ ಚೀನಾ ಜನಸಂಖ್ಯೆಯಲ್ಲಿ ಸುಮಾರು 8,50,000 ಇಳಿಕೆಯಾಗಿದೆ. ಆರು ದಶಕಗಳಲ್ಲಿ ಮೊದಲ ಬಾರಿಗೆ ಈ ಕುಸಿತ ಕಂಡಿದ್ದು, 2022ರ ಅಂತ್ಯದ ವೇಳೆ ಚೀನಾ ಜನಸಂಖ್ಯೆ 1.41 ಶತಕೋಟಿಗೆ (141 ಕೋಟಿ) ಆಗಿತ್ತು ಎಂದು ದೇಶದ ರಾಷ್ಟ್ರೀಯ ಅಂಕಿಅಂಶಗಳ ಬ್ಯೂರೋ ಹೇಳಿದೆ.
2022 ರಲ್ಲಿ ಚೀನಾದಲ್ಲಿ 9.56 ಮಿಲಿಯನ್ (95 ಲಕ್ಷ) ಮಕ್ಕಳು ಜನಿಸಿದರೆ, 10.41 ಮಿಲಿಯನ್ (1.41 ಕೋಟಿ) ಜನರು ಸಾವನ್ನಪ್ಪಿದ್ದಾರೆ ಎಂದು ಸರ್ಕಾರ ತಿಳಿಸಿದೆ.