ಯಾವ ಯಾವ ರಾಜ್ಯಗಳಲ್ಲಿ ಪಟಾಕಿ ನಿಷೇಧ!

ಗುರುವಾರ, 4 ನವೆಂಬರ್ 2021 (08:38 IST)
ಇಂದು ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತದೆ. ದೀಪ ಹಚ್ಚುವುದರ ಜೊತೆಗೆ ಪಟಾಕಿ ಹೊಡೆಯುವುದೂ ಸಹ ಹಬ್ಬದ ಒಂದು ಭಾಗವಾಗಿಬಿಟ್ಟಿದೆ.
ಆದರೆ ದೀಪಾವಳಿ ಹಬ್ಬಕ್ಕೆ ಮುಂಚಿತವಾಗಿ ಹಲವು ರಾಜ್ಯಗಳು ಪಟಾಕಿಯನ್ನು ನಿಷೇಧಿಸಿವೆ. ಹೀಗಾಗಿ ದೇಶಾದ್ಯಂತ ಹಲವು ರಾಜ್ಯಗಳು ಪಟಾಕಿ ಮಾರಾಟ ಹಾಗೂ ಹೊಡೆಯುವುದನ್ನು ನಿಷೇಧ ಮಾಡಿವೆ. ಕೆಲವು ರಾಜ್ಯಗಳು ಹಸಿರು ಪಟಾಕಿ ಮಾರಾಟ ಮಾಡುವಂತೆ, ಹೊಡೆಯವಂತೆ ಗ್ರಾಹಕರಿಗೆ ಆದೇಶ ನೀಡಿವೆ. ಪರಿಸರ ಸ್ನೇಹಿಯಾದ ಹಸಿರು ಪಟಾಕಿ ವಾಯು ಮಾಲಿನ್ಯ ಉಂಟು ಮಾಡುವುದಿಲ್ಲ.
ದೀಪಾವಳಿ ಹಬ್ಬಕ್ಕೆ ಪಟಾಕಿ ಸಿಡಿಸುವ ಬಗ್ಗೆ ನಿರ್ಬಂಧ ಹೇರಿರುವ ಹಾಗೂ ಕೆಲವು ಷರತ್ತುಗಳನ್ನು ವಿಧಿಸಿರುವ ರಾಜ್ಯಗಳ ಪಟ್ಟಿ ಹೀಗಿದೆ:
ದೆಹಲಿ
ದೆಹಲಿ ವಾಯುಮಾಲಿನ್ಯ ನಿಯಂತ್ರಣ ಸಮಿತಿಯು ಜನವರಿ 1, 2022 ರವರೆಗೆ ಪಟಾಕಿ ಮಾರಾಟ ಹಾಗೂ ಪಟಾಕಿ ಸಿಡಿಸುವುದನ್ನು ಸಂಪೂರ್ಣ ನಿಷೇಧಿಸಿದೆ.
ಹರಿಯಾಣ
ಹರಿಯಾಣ ಸರ್ಕಾರವು ಸಹ ಪಟಾಕಿ ನಿಷೇಧಿಸಿದೆ. ರಾಜ್ಯದ 14 ಜಿಲ್ಲೆಗಳಲ್ಲಿ ಪಟಾಕಿ ಮಾರಾಟ ಹಾಗೂ ಪಟಾಕಿ ಸಿಡಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಿ ಆದೇಶ ಹೊರಡಿಸಿದೆ. ಬೇರೆ ಭಾಗಗಳಲ್ಲಿ ಕೆಲವು ನಿರ್ಬಂಧಗಳನ್ನು ಹೇರಿದೆ. ಭಿವಾನಿ, ಚರ್ಕಿ ದಾದ್ರಿ, ಫರೀದಾಬಾದ್, ಗುರುಗ್ರಾಮ್, ಜಜ್ಜೀರ್, ಜಿಂದ್, ಕರ್ನಲ್, ಮಹೇಂದರ್ಘರ್, ನುಹ್, ಪಲ್ವಾಲ್, ಪಾಣಿಪತ್, ರೇವಾರಿ, ರೋಹ್ಟಕ್ ಮತ್ತು ಸೋನಿಪತ್ ಜಿಲ್ಲೆಗಳಲ್ಲಿ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಪ್ರಾಧಿಕಾರ ಪಟಾಕಿ ನಿಷೇಧಿಸಿದೆ.
ಕರ್ನಾಟಕ
ಕರ್ನಾಟಕ ಸರ್ಕಾರವು ದೀಪಾವಳಿ ಸಮಯದಲ್ಲಿ ಕೇವಲ ಹಸಿರು ಪಟಾಕಿಗಳನ್ನು ಮಾತ್ರ ಸಿಡಿಸಲು ಅವಕಾಶ ನೀಡಿದೆ. ಜೊತೆಗೆ ಕೋವಿಡ್-19 ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಆದೇಶಿಸಿದೆ. ‘‘ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಕೇವಲ ಹಸಿರು ಪಟಾಕಿಗಳನ್ನು ಮಾತ್ರ ಸಿಡಿಸಲು ಅವಕಾಶ ಇದೆ. ಬೇರೆ ಪಟಾಕಿಗಳ ಮಾರಾಟ/ ಸಿಡಿಸುವಿಕೆಗೆ ಅವಕಾಶ ಇಲ್ಲ‘‘ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಹೇಳಿದ್ದಾರೆ.
ಪಶ್ಚಿಮ ಬಂಗಾಳ
ಪಶ್ಚಿಮ ಬಂಗಾಳ ಮಾಲಿನ್ಯ ನಿಯಂತ್ರಣ ಮಂಡಳಿಯು ದೀಪಾವಳಿ ಹಬ್ಬಕ್ಕೆ ಕೇವಲ ಹಸಿರು ಪಟಾಕಿಗಳನ್ನು ಮಾತ್ರ ಸಿಡಿಸುವಂತೆ ಆದೇಶ ನೀಡಿದೆ. ದೀಪಾವಳಿ ಮತ್ತು ಕಾಳಿ ಪೂಜೆಯ ದಿನ 2 ಗಂಟೆ ಮಾತ್ರ ಅಂದರೆ ರಾತ್ರಿ 8-10 ಗಂಟೆವರೆಗೆ ಪಟಾಕಿ ಸಿಡಿಸಬಹುದು. ಪುಣೆ
ಪುಣೆಯಲ್ಲಿ ಸುತ್ಲಿ ಅಥವಾ ಆಟಂ ಬಾಂಬ್ ಎಂದು ಕರೆಯಲ್ಪಡುವ ಪಟಾಕಿ ಉತ್ಪಾದನೆ, ಮಾರಾಟ ಮತ್ತು ಸಿಡಿಸುವುದನ್ನು ನಿಷೇಧಿಸಲಾಗಿದೆ. ಅಕ್ಟೋಬರ್ 27ರಿಂದ ನವೆಂಬರ್ 7ರವರೆಗೆ ನಗರದಲ್ಲಿ ಪಟಾಕಿ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಆದರೆ 125 ಡೆಸಿಬಲ್ಗಿಂತ ಹೆಚ್ಚಿನ ಶಬ್ದವನ್ನು ಉಂಟುಮಾಡುವ ಪಟಾಕಿಗಳನ್ನು ಸಿಡಿಸದಂತೆ ಸರ್ಕಾರ ಜನರಿಗೆ ಆದೇಶ ನೀಡಿದೆ.
ಛತ್ತೀಸ್ಗಢ
ಛತ್ತೀಸ್ಗಢ ಸರ್ಕಾರವು ದೀಪಾವಳಿ ಮತ್ತು ಗುರುಪರ್ವದ ಸಮಯದಲ್ಲಿ ರಾತ್ರಿ 8-10 ಗಂಟೆಯವರೆಗೆ ಪಟಾಕಿಗಳನ್ನು ಸಿಡಿಸಬಹುದು ಎಂದು ಹೇಳಿದೆ. ಮಾರ್ಗಸೂಚಿ ಅನ್ವಯ, ಛತ್ ಪೂಜೆಯಂದು ಬೆಳಗ್ಗೆ 6-8, ಹೊಸ ವರ್ಷ ಮತ್ತು ಕ್ರಿಸ್ಮಸ್ ದಿನ ರಾತ್ರಿ 11.55ರಿಂದ ಮಧ್ಯರಾತ್ರಿ 12.30 ರವರೆಗೆ ಪಟಾಕಿ ಸಿಡಿಸುಬಹುದು.
ಪಾಂಡಿಚೇರಿ
ಕೇಂದ್ರಾಡಳಿತ ಪ್ರದೇಶವು ದೀಪಾವಳಿಗೂ ಮುನ್ನ ಕಡಿಮೆ ದರದಲ್ಲಿ ಪಟಾಕಿ ಮಾರಾಟಕ್ಕೆ ಅವಕಾಶ ನೀಡಿದೆ. ಸರ್ಕಾರಿ ಸಂಸ್ಥೆಯಾದ ಪ್ಯಾಪ್ಸ್ಕೋ ಪಾಂಡಿಚೇರಿಯಾದ್ಯಂತ ಪಟಾಕಿಗಳನ್ನು ಸಬ್ಸಿಡಿ ದರದಲ್ಲಿ ಮಾರಾಟ ಮಾಡಲು ಮಳಿಗೆಗಳನ್ನು ಸ್ಥಾಪಿಸಿದೆ.
ರಾಜಸ್ಥಾನ
ರಾಜಸ್ಥಾನ ಸರ್ಕಾರವು ಈ ದೀಪಾವಳಿಯಲ್ಲಿ ಹಸಿರು ಪಟಾಕಿಗಳ ಮಾರಾಟ ಮತ್ತು ಬಳಕೆಗೆ ಮಾತ್ರ ಅನುಮತಿ ನೀಡಿದೆ. ಮುಂಬರುವ ಹಬ್ಬ-ಹರಿದಿನಗಳಲ್ಲಿ ಪಟಾಖಿ ಸಿಡಿಸುವ ನಿರ್ಬಂಧಿತ ಸಮಯವನ್ನು ಸರ್ಕಾರ ಹೊರಡಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ