ಏರ್‌ಪೋರ್ಟ್‌, ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ!

ಮಂಗಳವಾರ, 30 ನವೆಂಬರ್ 2021 (10:10 IST)
ಬೆಂಗಳೂರು : ಓಮಿಕ್ರಾನ್ ಆತಂಕದ ಹಿನ್ನೆಲೆಯಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಈ ಬಗ್ಗೆ ಮಂಗಳವಾರ ನಡೆಯಲಿರುವ ತಜ್ಞರ ಸಭೆಯಲ್ಲೂ ಚರ್ಚೆ ನಡೆಯಲಿದೆ ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಂಗಳವಾರ ಮಾತನಾಡಿದ ಅವರು, ಓಮಿಕ್ರಾನ್ ಎಂಬ ಹೊಸ ಪ್ರಭೇದದ ಕೋವಿಡ್ 19 ಸೋಂಕಿನ ಬಗ್ಗೆ ಡಿಸೆಂಬರ್ 1ನೇ ತಾರೀಕಿನ ಬಳಿಕ ವರದಿ ಸಿಗಲಿದೆ. ಹಾಗಿದ್ದರೂ ಗಡಿಗಳಲ್ಲಿ, ವಿಮಾನ ನಿಲ್ದಾಣದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ತಿಳಿಸಿದರು.
ದಕ್ಷಿಣ ಆಫ್ರಿಕಾದಿಂದ ಬಂದ ಇಬ್ಬರಲ್ಲಿ ಕೋವಿಡ್ ಕಂಡು ಬಂದಿದ್ದು ಈ ಪೈಕಿ 63 ವರ್ಷದ ಓರ್ವ ವ್ಯಕ್ತಿಯಲ್ಲಿ ಡೆಲ್ಟಾಗಿಂತ ಭಿನ್ನ ಸ್ವರೂಪದ ವೈರಸ್ ಪತ್ತೆಯಾಗಿದೆ. ಇದರ ಮಾದರಿಯನ್ನು ಐಸಿಎಂಆರ್ಗೆ ಕಳಿಸಿಕೊಡಲಾಗಿದ್ದು ಇನ್ನೂ ವರದಿ ಕೈಸೇರಿಲ್ಲ, ಇನ್ನೆರಡು ದಿನಗಳಲ್ಲಿ ವರದಿ ಸಿಗಲಿದೆ ಎಂದರು.
ಕೋವಿಡ್ ನ ಹೊಸ ರೂಪಾಂತರಿ ಓಮಿಕ್ರಾನ್ ವೈರಾಣು 12 ದೇಶಗಳಲ್ಲಿ ಪತ್ತೆಯಾಗಿದೆ. ರಾಜ್ಯದಲ್ಲಿ ವಿಮಾನ ನಿಲ್ದಾಣ ಸೇರಿದಂತೆ ವಿವಿಧೆಡೆ ಎಲ್ಲಾ ಪ್ರಯಾಣಿಕರಿಗೆ ಕೊರೊನಾ ಪರೀಕ್ಷೆ ಮಾಡಲಾಗುತ್ತಿದೆ. ಕಳೆದ 12-13 ದಿನಗಳಲ್ಲಿ ನಿರ್ದಿಷ್ಟ ದೇಶಗಳಿಂದ ಬಂದವರ ಮೇಲೆ ನಿಗಾ ಇರಿಸಿ, ಅವರ ಸಂಪರ್ಕಿತರ ಪತ್ತೆ ಹಚ್ಚಲಾಗುತ್ತಿದೆ. ಹೊಸ ವೈರಾಣು ಕುರಿತು ಜನರು ಅನಗತ್ಯವಾಗಿ ಆತಂಕಗೊಳ್ಳುವ ಅಗತ್ಯವಿಲ್ಲ. ಆದರೆ ಈ ಮೊದಲಿನಂತೆಯೇ ಎಲ್ಲರೂ ಕೋವಿಡ್ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು ಎಂದು ಮನವಿ ಮಾಡುತ್ತೇನೆ ಎಂದು ಸುಧಾಕರ್ ತಿಳಿಸಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ