ಚಂಡಮಾರುತ ದಾಳಿ ಸಾಧ್ಯತೆ

ಭಾನುವಾರ, 8 ಮೇ 2022 (09:15 IST)
ಭುಬನೇಶ್ವರ : ದಕ್ಷಿಣ ಅಂಡಮಾನ್ ಸಮುದ್ರದಲ್ಲಿ ಶುಕ್ರವಾರ ಕಡಿಮೆ ಒತ್ತಡ ಪ್ರದೇಶ ನಿರ್ಮಾಣಗೊಂಡಿದ್ದು,

ಶೀಘ್ರವೇ ಇದು ಚಂಡಮಾರುತದ ಸ್ವರೂಪ ತಾಳಿ ಆಂಧ್ರ ಪ್ರದೇಶ ಹಾಗೂ ಒಡಿಶಾದ ತೀರ ಪ್ರದೇಶಗಳಿಗೆ ಅಪ್ಪಳಿಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಈ ನಿಟ್ಟಿನಲ್ಲಿ ಒಡಿಶಾದಲ್ಲಿ ಹೈ ಅಲರ್ಚ್ ಘೋಷಣೆ ಮಾಡಲಾಗಿದೆ.

‘ಕಡಿಮೆ ಒತ್ತಡ ಪ್ರದೇಶವು ವಾಯುವ್ಯ ದಿಕ್ಕಿನಲ್ಲಿ ಸಾಗುತ್ತಿದ್ದು ಬಂಗಾಳಕೊಲ್ಲಿಯಲ್ಲಿ ಭಾನುವಾರ ಚಂಡಮಾರುತದ ರೂಪ ತಾಳುವ ಸಾಧ್ಯತೆಯಿದೆ. ಮೇ 10 ರಂದು ಚಂಡಮಾರುತವು ಆಂಧ್ರ ಪ್ರದೇಶ ಹಾಗೂ ಒಡಿಶಾದ ತೀರ ಪ್ರದೇಶಗಳಿಗೆ ಅಪ್ಪಳಿಸಲಿದೆ’ ಎಂದು ಐಎಂಡಿ ಅಂದಾಜಿಸಿದೆ.

ಅಲ್ಲದೇ ಚಂಡಮಾರುತದ ಪ್ರಭಾವದಿಂದಾಗಿ ಪೂರ್ವ ಕರಾವಳಿ ರಾಜ್ಯಗಳಲ್ಲಿ ಗುಡುಗು ಸಿಡಿಲುಗಳೊಂದಿಗೆ ಭಾರೀ ಮಳೆಯಾಲಿದೆ ಎಂದು ವಿಶ್ಲೇಷಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಒಡಿಶಾ ಸರ್ಕಾರ ಈಗಾಗಲೇ ವಿಪತ್ತು ನಿರ್ವಹಣಾ ವ್ಯವಸ್ಥೆಯನ್ನು ಸನ್ನದ್ಧ ಸ್ಥಿತಿಯಲ್ಲಿರಿಸಿದೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ 17 ತಂಡಗಳು, ಒಡಿಆರ್ಎಫ್ನ 20 ತಂಡಗಳು ಹಾಗೂ ಅಗ್ನಿಶಾಮಕ ದಳದ 175 ತಂಡಗಳಿಗೆ ಹೈ ಅಲರ್ಚ್ ಘೋಷಣೆ ಮಾಡಲಾಗಿದೆ. ಮೀನುಗಾರರಿಗೆ ಸಮುದ್ರಕ್ಕೆ ಹೋಗದಂತೆ ಸೂಚನೆ ನೀಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ