ಬೆಂಗಳೂರು: 4 ಕೈ, 4 ಕಾಲಿನ ಮಗುವಿಗೆ ಶಸ್ತ್ರಚಿಕಿತ್ಸೆ

ಮಂಗಳವಾರ, 6 ನವೆಂಬರ್ 2007 (19:47 IST)
PTI
ನಾಲ್ಕುಕೈ, ನಾಲ್ಕು ಕಾಲುಗಳುಳ್ಳ ಎರಡು ವರ್ಷ ಪ್ರಾಯದ ಬಾಲಕಿಯೊಬ್ಬಾಕೆಯ ಜನ್ಮಜಾತ ವೈಕಲ್ಯವನ್ನು ಸರಿಪಡಿಸುವ ನಿಟ್ಟಿನಲ್ಲಿ 40 ಗಂಟೆಗಳ ಅವಿರತ ಶಸ್ತ್ರಚಿಕಿತ್ಸೆ ಕಾರ್ಯವು ಬೆಂಗಳೂರಿನಲ್ಲಿ ಮಂಗಳವಾರ ಬೆಳಗ್ಗೆ ಆರಂಭವಾಗಿದ್ದು, ಮಗುವಿನ ಬೆನ್ನು ಹುರಿಯನ್ನು ಯಶಸ್ವಿಯಾಗಿ ಪ್ರತ್ಯೇಕಿಸಲಾಗಿದೆ.

ಮಗುವಿನ ಆರೋಗ್ಯ ಸ್ಥಿರವಾಗಿದೆ. ಈಗ ವೈದ್ಯರು ಆಕೆಯ ಜಠರ ಭಾಗವನ್ನು ಪ್ರತ್ಯೇಕಿಸಿ ಸರಿಪಡಿಸುವಲ್ಲಿ ನಿರತರಾಗಿದ್ದಾರೆ. ಪೆಲ್ವಿಕ್ ರಿಂಗ್ ಪುನರ್‌ಸ್ಥಾಪನೆಯಾದಲ್ಲಿ ಶಸ್ತ್ರಚಿಕಿತ್ಸೆಯ ಮೊದಲ ಹಂತ ಯಶಸ್ವಿಯಾಗಿ ಪೂರ್ಣಗೊಂಡಂತಾಗುತ್ತದೆ ಎಂದು ಚಿಕಿತ್ಸೆಯ ನೇತೃತ್ವ ವಹಿಸಿರುವ ಡಾ.ಶರಣ್ ಪಾಟೀಲ್ ತಿಳಿಸಿದ್ದಾರೆ.

ಒಂದೇ ತಲೆ ಇರುವ ಅವಳಿ ಮಕ್ಕಳ ಸಂಯೋಗದಿಂದಾಗಿ ಈ ವೈಕಲ್ಯ ಉಂಟಾಗಿದ್ದು, ಬಾಲಕಿ ಲಕ್ಷ್ಮಿಯು ಬಿಹಾರದ ಅರಾರಿಯಾ ಜಿಲ್ಲೆಯ ಪುಟ್ಟ ಹಳ್ಳಿಯವಳು.

ಬೆಳಗ್ಗೆ 7 ಗಂಟೆಗೆ ನಗರದ ನಾರಾಯಣ ಆರೋಗ್ಯ ನಗರಿಯ ಸ್ಪರ್ಶ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಆರಂಭಿಸಲಾಗಿದೆ. ಆಕೆಯ ಸ್ಥಿತಿ ಸ್ಥಿರವಾಗಿದೆ ಎಂದು ಶಸ್ತ್ರಚಿಕಿತ್ಸೆಯ ನೇತೃತ್ವ ವಹಿಸಿರುವ ಡಾ.ಶರಣ್ ಪಾಟೀಲ್ ವಿವರಿಸಿದ್ದಾರೆ.

ಬೆಳಗ್ಗೆ 8.45ಕ್ಕೆ ನಾವು ಮೊದಲು ಶಸ್ತ್ರ ಪ್ರಯೋಗ ಆರಂಭಿಸಿದೆವು. ಉದರ ಭಾಗದಲ್ಲಿ ಅಂಗಗಳನ್ನು ಒಂದೊಂದಾಗಿ ನೋಡಿದೆವು. ಕೆಲವು ಅನಿರೀಕ್ಷಿತವಾದುದನ್ನು ನೋಡಿದೆವು. ಅವುಗಳನ್ನು ಯಶಸ್ವಿಯಾಗಿ ಸರಿಪಡಿಸಿದ್ದೇವೆ. ನಾವಂದುಕೊಂಡಂತೆ ಎಲ್ಲವೂ ನಡೆಯುತ್ತಿದೆ. ಲಕ್ಷ್ಮಿಯ ದೇಹಸ್ಥಿತಿ ಸ್ಥಿರವಾಗಿದೆ ಎಂದು ಅವರು ಹೇಳಿದರು.

ಹಳ್ಳಿಗರು ಆಕೆಯನ್ನು ಮೊದಲು ದೇವಿ ಲಕ್ಷ್ಮೀಯ ಅವತಾರ ಎಂದು ನಂಬಿದ್ದರು. ಆದರೆ ಆಕೆಯದು ಇದು ಅಂಗ ವೈಕಲ್ಯ ಎಂಬುದು ಕೆಲವು ಸಮಯದ ಬಳಿಕ ಅವರ ಅರಿವಿಗೆ ಬಂದಿತ್ತು.

ದುಬಾರಿ ಶಸ್ತ್ರಚಿಕಿತ್ಸೆ ಮಾಡಿಸಲಾರದ ಲಕ್ಷ್ಮಿಯ ಹೆತ್ತವರಿಗೆ ಬೆಂಗಳೂರಿನ ವೈದ್ಯ ಶರಣ್ ಪಾಟೀಲ್ ಸಹಾಯ ಹಸ್ತ ನೀಡಿದ್ದು, ಉಚಿತವಾಗಿ ಶಸ್ತ್ರಚಿಕಿತ್ಸೆ ನೆರವೇರಿಸುವುದಾಗಿ ಭರವಸೆ ನೀಡಿದ್ದರು.

ಅವಳಿ ಮಕ್ಕಳ ಜಠರ ಭಾಗದಲ್ಲಿ ಒಂದನ್ನೊಂದು ಕೂಡಿಕೊಂಡಿರುವ ಇಶಿಯೋಫೇಗಸ್ ಟೆಟ್ರಾಪಸ್ ಎಂಬ ವೈದ್ಯಕೀಯ ಜಗತ್ತಿನ ಅಪರೂಪದ ವೈಕಲ್ಯ ಇದಾಗಿದ್ದು, ಈ ಕಾರಣಕ್ಕೆ ನಾಲ್ಕು ಕೈ, ನಾಲ್ಕು ಕಾಲುಗಳನ್ನು ಲಕ್ಷ್ಮಿ ಹೊಂದಿದ್ದಾಳೆ. ಮತ್ತೊಂದು ಅವಳಿ ಮಗುವಿಗೆ ತಲೆಯಿಲ್ಲದ ಕಾರಣ, ಪರಾವಲಂಬಿಯಂತೆ ಈ ಮಗು ಗೋಚರಿಸುತ್ತದೆ.

ಲಕ್ಷ್ಮಿಯ ದೇಹದಿಂದ ಪರಾವಲಂಬಿಯ ಭಾಗವನ್ನು ತೆಗೆಯುವ ಸವಾಲನ್ನು ವೈದ್ಯರು ಹೊಂದಿದ್ದು, ಆಕೆ ಬೆಳೆದಲ್ಲಿ ಅದು ಮತ್ತಷ್ಟು ಸಂಕೀರ್ಣ ಶಸ್ತ್ರಚಿಕಿತ್ಸೆಯಾಗುವ ಸಾಧ್ಯತೆಗಳಿದ್ದವು.

ಮಗುವಿನ ಪೋಷಣೆಯು ಸಂಕೀರ್ಣವಾಗುತ್ತಿದೆ. ಈ ಪರಾವಲಂಬಿ ಜೀವಿಯ ಭಾಗವನ್ನು ಪೋಷಿಸುವುದು ಮಗುವಿಗೆ ಕಷ್ಟಕರ ಎಂದು ತಿಳಿಸಿರುವ ಡಾ.ಪಾಟೀಲ್, ಶಸ್ತ್ರಚಿಕಿತ್ಸೆಗೆ 48 ಗಂಟೆ ತಗುಲಬಹುದು ಎಂದಿದ್ದಾರೆ. 16 ವಿಶೇಷ ತಜ್ಞರೂ ಸೇರಿದಂತೆ, 36 ವೈದ್ಯರು ಶಸ್ತ್ರಚಿಕಿತ್ಸೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಶಸ್ತ್ರಚಿಕಿತ್ಸೆಯು ಶೇ.25ರಷ್ಟು ರಿಸ್ಕ್ ಒಳಗೊಂಡಿದೆ ಎಂಬುದರ ಅರಿವಿದ್ದರೂ, ತಮ್ಮ ಮಗುವಿಗೆ ಸಾಧ್ಯವಿರುವ ಅತ್ಯುತ್ತಮ ಚಿಕಿತ್ಸೆ ಮಾಡಿಸಲು ಲಕ್ಷ್ಮಿಯ ಹೆತ್ತವರಾದ ಶಂಭು, ಪೂನಂ ಮನಸ್ಸು ಗಟ್ಟಿ ಮಾಡಿದ್ದಾರೆ. ಅವರಿಬ್ಬರೂ ಕೂಲಿ ಮಾಡಿ ಬದುಕುವವರು. ಇದು ಅವರ ಎರಡನೇ ಮಗು. ಅಕ್ಟೋಬರ್ 3ರಂದು ಅವರು ಸ್ಪರ್ಶ ಆಸ್ಪತ್ರೆಗೆ ಬಂದಿದ್ದರು.

ವೆಬ್ದುನಿಯಾವನ್ನು ಓದಿ