ಗರ್ಭಾವಸ್ಥೆಯ ಕುಡಿತ, ತಾಯಿಮಗು ಅಕ್ಕರೆ ಕಡಿತ!

ಗುರುವಾರ, 30 ಏಪ್ರಿಲ್ 2009 (11:52 IST)
ಕಡುಕಿ ಮಹಿಳೆಯರೇ ಇತ್ತ ಕೇಳಿ. ಮೊತ್ತ ಮೊದಲಿಗೆ ಹೇಳುವುದಾದರೆ ಮದ್ಯಪಾನ ಆರೋಗ್ಯಕ್ಕೆ ಒಳ್ಳೆಯದಲ್ಲ. ಇದು ತಿಳಿದೂ ಕುಡಿತದ ಚಟಕ್ಕೆ ನೀವು ಬಿದ್ದಿದ್ದರೆ, ಕನಿಷ್ಠಪಕ್ಷ ಗರ್ಭಧರಿಸಿದ್ದಾಗಲಾದರೂ ನಿಮ್ಮ ಚಟಕ್ಕೆ ಟಾಟಾ ಹೇಳಲೇ ಬೇಕು. ಇಲ್ಲವೆಂದಾದರೆ ಇದು ಭವಿಷ್ಯದಲ್ಲಿ ನಿಮ್ಮ ತಾಯಿ-ಮಗು ನಡುವಿನ ಅನುಬಂಧಕ್ಕೇ ಕುತ್ತುಂಟುಮಾಡುತ್ತದೆ ಎಂಬುದಾಗಿ ಹೊಸ ಅಧ್ಯಯನ ಒಂದು ಹೇಳುತ್ತದೆ.

ಅಬರ್ದೀನ್ ರಾಬರ್ಟ್ ಗಾರ್ಡನ್ ವಿಶ್ವವಿದ್ಯಾನಿಲಯದ ಸಂಶೋಧಕರು 130 ಚೊಚ್ಚಲ ಬಸುರಿಯರನ್ನು ತಮ್ಮ ಅಧ್ಯಯನಕ್ಕೆ ಬಳಸಿಕೊಂಡಿದ್ದು, ಅವರ ಮದ್ಯಪಾನ ಸೇವನೆಯ ಹವ್ಯಾಸವನ್ನು ಪರಿಗಣಿಸಿದ್ದರು.

ಶಿಶು ಜನನದ ಬಳಿಕ, ಹೆರಿಗೆ ವಿಧಾನ, ಆಸ್ಪತ್ರೆಯಲ್ಲಿ ಉಳಿಯಬೇಕಾದ ಅವಧಿ, ಗರ್ಭಾವಸ್ಥೆ ಮತ್ತು ಹೆರಿಗೆ ಸಂಕೀರ್ಣತೆಗಳು, ತಾಯಿಯ ಮಮತೆ ಮತ್ತು ಜನನಾ ನಂತರದ ಮದ್ಯಪಾನ ಹವ್ಯಾಸದ ಕುರಿತ ಅಂಶಗಳ ಪರಿಶೀಲನೆ ನಡೆಸಲಾಗಿತ್ತು.

ಮಗುವಿನೊಂದಿಗಿನ ನಿಕಟತೆಯ ಕುರಿತು ಪತ್ತೆಮಾಡಲು, ಗಮನೀಯ ಎಂಬಂತೆ ಎಲ್ಲಾ ತಾಯಂದಿರಿಗೆ ಸರಣಿ ಪ್ರಶ್ನೆಗಳನ್ನು ಕೇಳಲಾಗಿತ್ತು. ಗರ್ಭಾವಸ್ಥೆಯಲ್ಲಿ ಕಡಿತದ ಚಟವಿರದಿದ್ದ ತಾಯಂದಿರು ತಮ್ಮ ಶಿಶುಗಳೊಂದಿಗೆ ಕುಡುಕಿ ತಾಯಂದಿರಿಗಿಂತ ಹೆಚ್ಚಿನ ಪ್ರಮಾಣದ ಅನುಬಂಧ ಹೊಂದಿದ್ದರು ಎಂಬ ಅಂಶ ಪತ್ತೆಯಾಗಿದೆ.

ತಿಂಗಳಿಗೆ ಒಂದಾವರ್ತಿ 'ಗುಂಡುಹಾಕುವ' ಹವ್ಯಾಸವಿದ್ದ ಬಾಣಂತಿಯರು ಆಸ್ಪತ್ರೆಯಲ್ಲಿ ಇತರರಿಗಿಂತ ಒಂದು ದಿನ ಹೆಚ್ಚು ಉಳಿಯಬೇಕಾದ ಸಂಭವ ಉಂಟಾಗುತ್ತದೆ ಎಂಬ ವಿಚಾರವನ್ನೂ ಅಧ್ಯಯನ ಬೆಳಕಿಗೆ ತಂದಿದೆ.

ಅತ್ಯಂತ ಸಣ್ಣ ಪ್ರಮಾಣದ ಕುಡಿತವೂ ಸಹ ಮಹಿಳೆಯರ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ ಎಂಬುದಾಗಿ ಸಂಶೋಧಕರಲ್ಲಿ ಒಬ್ಬರಾಗಿರುವ ಡಾ| ಕತ್ರಿನಾ ಫೋರ್ಬ್ಸ್-ಮೆಕೆ ಅವರನ್ನು ಉಲ್ಲೇಖಿಸಿ ದಿ ಡೇಲಿ ಟೆಲಿಗ್ರಾಫ್ ವರದಿಮಾಡಿದೆ.

ಗರ್ಭ ಧರಿಸಿದ ವೇಳೆ ಕುಡಿತವು ಹೆರಿಗೆಯ ನಂತರ ತಾಯಿಯನ್ನು ಹೆಚ್ಚುಕಾಲ ಆಸ್ಪತ್ರೆಯಲ್ಲಿ ಉಳಿಯುವಂತೆ ಮಾಡುತ್ತದೆ ಮಾತ್ರವಲ್ಲದೆ, ತಾಯಿ ಮಗುವಿನ ನಡುವಿನ ಮಮತೆ, ಅಕ್ಕರೆಯ ಅನುಬಂಧದ ಮೇಲೂ ನೆಗೆಟೀವ್ ಪರಿಣಾಮ ಬೀರುತ್ತದೆ ಎಂದು ವರದಿ ಹೇಳಿದೆ. ಗರ್ಭಾವಸ್ಥೆಯಲ್ಲಿ ಒಮ್ಮೆಯೂ ಡ್ರಿಂಕ್ ತಗೊಳ್ಳದೇ ಇರುವ ಮಹಿಳೆಯರಲ್ಲಿ ತಾಯಿಮಗುವಿನ ಸಂಬಂಧವು ಕಡುಕಿ ಮಹಿಳೆಯರಿಗೆ ಹೋಲಿಸಿದರೆ ಅತ್ಯುತ್ತಮವಾಗಿರುತ್ತದೆ ಎಂದೂ ವೈದ್ಯೆ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ