4 ತಿಂಗಳ ಹಸುಳೆಗೆ ಮರುಜನ್ಮ ನೀಡಿದ ವಯಾಗ್ರ!

ಕಾಮೋತ್ತೇಜಕ ಔಷಧ ವಯಾಗ್ರಾವು ಮಗುವಿನ ಪ್ರಾಣವನ್ನೂ ಉಳಿಸಬಲ್ಲುದು! ಹೌದು. ನೀವಿದನ್ನು ನಂಬಲೇಬೇಕು. ಅತ್ಯಪರೂಪದ ಜನ್ಮಜಾತ ಹೃದಯದ ತೊಂದರೆಯಿಂದ ಬಳಲುತ್ತಿದ್ದ 4 ತಿಂಗಳ ಹಸುಳೆ ತನಿಷಾ ಇದೇ ವಯಾಗ್ರದ ಪ್ರಭಾವದಿಂದ ಮರುಹುಟ್ಟು ಪಡೆದಿದ್ದಾಳೆ. ಚೆನ್ನೈಯ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆಯೊಂದರಲ್ಲಿ ನಡೆದ ಸುದೀರ್ಘ ಶಸ್ತ್ರಕ್ರಿಯೆ ವೇಳೆ ಮಗುವಿಗೆ ವಯಾಗ್ರ ನೀಡಲಾಗಿದ್ದು, ಅದು ಆ ಹಸುಳೆಯ ರಕ್ತದೊತ್ತಡವನ್ನು ತಗ್ಗಿಸಲು ನೆರವಾಗಿತ್ತು.

ಕೋಲ್ಕತಾದ ಸುಬ್ರತಾ ಮತ್ತು ದೀಪಾ ಸಹಾ ದಂಪತಿಗೆ (ಸಿಸೇರಿಯನ್) ಶಸ್ತ್ರಕ್ರಿಯೆ ಮೂಲಕ ಕಳೆದ ಡಿಸೆಂಬರ್ ತಿಂಗಳಲ್ಲಿ ಜನಿಸಿದ್ದ ಹಸುಳೆ ತನಿಷಾಗೆ ಕಳೆದ ಎರಡು ತಿಂಗಳಿಂದ ಉಸಿರಾಟದ ತೊಂದರೆ. ಇದು ಎಷ್ಟರಮಟ್ಟಿಗಿತ್ತೆಂದರೆ ಕೆಲವೊಮ್ಮೆ ಇಡೀ ಮಗುವಿನ ದೇಹವೇ ನೀಲಿಗಟ್ಟುತ್ತಿತ್ತು.

ಈ ಪುಟ್ಟ ಹಸುಳೆಗೆ ಕಾಡುತ್ತಿದ್ದದ್ದು ಸಯನೋಟಿಕಾ ಎಂಬ ಜನ್ಮಜಾತ ಹೃದಯದ ಸಮಸ್ಯೆ. ಲಕ್ಷದಲ್ಲೊಬ್ಬರಿಗೆ ಇದು ಕಾಡುತ್ತದೆ. ಈ ಹಸುಳೆಯ ಹೃದಯವು ಬಲಭಾಗದಲ್ಲಿತ್ತು. ಮತ್ತು ಅದರಲ್ಲಿ ರಂಧ್ರವೂ ಇತ್ತು. ಅಷ್ಟು ಮಾತ್ರವಲ್ಲದೆ, ಅದರ ಶ್ವಾಸಕೋಶವು ಸರಿಯಾಗಿ ಕಾರ್ಯ ನಿರ್ವಹಿಸುತ್ತಿರಲಿಲ್ಲ. ಪಪ್ಪುಸದ ಬೆಳವಣಿಗೆ ಅಪೂರ್ಣವಾಗಿತ್ತು ಎಂದು ಚೆನ್ನೈಯ ಫೋರ್ಟಿಸ್ ಹೆಲ್ತ್‌ಕೇರ್‌ನ ಭಾಗವಾಗಿರುವ ಮಲಾರ್ ಆಸ್ಪತ್ರೆಯ ಹೃದ್ರೋಗ ತಜ್ಞ ಕೆ.ಆರ್.ಬಾಲಕೃಷ್ಣನ್ ಗುರುವಾರ ವಿವರಿಸಿದ್ದಾರೆ.

ಬಲ ಶ್ವಾಸಕೋಶದಲ್ಲಿ ಅತ್ಯಧಿಕ ರಕ್ತದೊತ್ತಡ ಹೊಂದಿದ್ದ ಈ ಮಗುವಿನ ದೇಹದಲ್ಲಿ ಇದರಿಂದಾಗಿ ರಕ್ತವು ವಿರುದ್ಧ ದಿಕ್ಕಿನ ಮೂಲಕ ಹೃದಯಕ್ಕೆ ಪರಿಚಲನೆಯಾಗುತ್ತಿತ್ತು ಎಂದವರು ಹೇಳಿದ್ದಾರೆ.

ಇದೊಂದು ಅತ್ಯಂತ ಸಂಕೀರ್ಣವಾದ ನಾಲ್ಕು ಗಂಟೆಗಳ ಸುದೀರ್ಘ ಅವಧಿಯ ಅತ್ಯಂತ ರಿಸ್ಕ್ ಇದ್ದ ಶಸ್ತ್ರಕ್ರಿಯೆಯಾಗಿತ್ತು. ಸಿಲ್ಬೆನ್‌ಫ್ರಿಲ್ ರೂಪದಲ್ಲಿ ಬಳಸಲಾಗುವ ವಯಾಗ್ರವನ್ನು ಶಸ್ತ್ರಕ್ರಿಯೆಯ ವೇಳೆ ಶ್ವಾಸಕೋಶದಲ್ಲಿ ರಕ್ತದೊತ್ತಡ ಕಡಿಮೆ ಮಾಡಿಸಲು ಬಾಯಿಯ ಮೂಲಕ ನೀಡಲಾಯಿತು ಎಂದು ಈ ರೀತಿಯ ಏಳನೇ ಶಸ್ತ್ರಕ್ರಿಯೆ ನಿರ್ವಹಿಸಿರುವ ಬಾಲಕೃಷ್ಣನ್ ಹೇಳಿದ್ದಾರೆ.

ಏಪ್ರಿಲ್ 3ರಂದು ಕೋಲ್ಕತಾದಿಂದ ಆರಂಭಿಸಿ ಚೆನ್ನೈ ತಲುಪುವ ವೇಳೆಗೆ ಈ ನಾಲ್ಕು ತಿಂಗಳ ಹಸುಳೆಗೆ ನಾಲ್ಕು ಬಾರಿ ಶ್ವಾಸಾಘಾತ (ರೆಸ್ಪಿರೇಟರಿ ಅಟ್ಯಾಕ್) ಆಗಿತ್ತು. ಎರಡು ತಿಂಗಳಿಂದ ಈ ಮಗು ಆಸ್ಪತ್ರೆಯಲ್ಲೇ ಇತ್ತು.

ವೆಬ್ದುನಿಯಾವನ್ನು ಓದಿ