ಎಚ್ಐವಿ ವೈರಸ್ ಅಡಗುವ ಜಾಗ ಪತ್ತೆ

ಸೋಮವಾರ, 22 ಜೂನ್ 2009 (19:02 IST)
ND
ವಿಶ್ವಾದ್ಯಂತ ಹಬ್ಬಿರುವ ಮಹಾಮಾರಿ ಏಡ್ಸ್ ಅನ್ನು ಗುಣಪಡಿಸಲು ಅನುಕೂಲಕರವಾಗುವಂತ ವಿಚಾರ ಒಂದನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದು ಸಂತೋಷದ ಸುದ್ದಿಯೊಂದು ವರದಿಯಾಗಿದೆ. ಏಡ್ಸ್‌ಗೆ ಕಾರಣವಾಗಿರುವ ಎಚ್ಐವಿ ವೈರಸ್ ಮಾನವದೇಹದಲ್ಲಿ ಎಲ್ಲಿ ಅಡಗಿರುತ್ತದೆ ಎಂಬುದನ್ನು ಕೆನಾಡದ ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ.

ಈ ಮಹತ್ವದ ಸಂಶೋಧನೆಯು ಮಾರಣಾಂತಿಕ ಕಾಯಿಲೆಯನ್ನು ಸಂಪೂರ್ಣ ಗುಣಪಡಿಸಲು ರಹದಾರಿ ಹಾಕಿಕೊಟ್ಟಿದೆ ಎಂಬುದಾಗಿ ಅಧ್ಯಯನ ಕೈಗೊಂಡಿರುವ ಸಂಶೋಧಕರು ಹೇಳುತ್ತಾರೆ.

ಎಚ್ಐವಿ ಹೊಂದಿರುವವರಿಗೆ ಪ್ರಸಕ್ತವಿರುವ ವೈರಸ್ ನಿರೋಧಕ ಚಿಕಿತ್ಸೆಯು ಅದನ್ನು ಹಿಡಿತದಲ್ಲಿಡುತ್ತಿತ್ತೇ ವಿನಹ ಸಂಪೂರ್ಣವಾಗಿ ತೊಡೆದು ಹಾಕುತ್ತಿರಲಿಲ್ಲ. ಯಾಕೆಂದರೆ ಈ ವೈರಸ್‌ಗಳು ಎಲ್ಲಿಯೋ ಅಡಗಿ ಬಳಿಕ ಮತ್ತೆ ದೇಹದ ಮೇಲೆ ದಾಳಿ ಮಾಡುತ್ತಿತ್ತು.

ಏಡ್ಸ್ ವೈರಸ್ ಕಿಡ್ನಿ ಅಥವಾ ಮೆದುಳಿನಲ್ಲಿ ಅಡಗಿರಬಹುದು ಎಂಬುದಾಗಿ ವಿಜ್ಞಾನಿಗಳು ಇದುವರೆಗೆ ಊಹಿಸಿದ್ದರು. ಆದರೆ ಮಾನವ ದೇಹದಲ್ಲಿ ಈ ಮಾರಣಾಂತಿಕ ವೈರಸ್‌ಗಳು ಎಲ್ಲಿ ಅಡಗಿರುತ್ತವೆ ಎಂಬುದನ್ನು ಪತ್ತೆ ಹಚ್ಚಿರುವುದಾಗಿ ಕೆನಡಾದ ಸಂಶೋಧಕರು ಹೇಳಿದ್ದಾರೆ.

ಪ್ರೋ. ರಾಫಿಕ್ ಪಿರ್ರೆ ಸೆಕಾಲಿ ನೇತೃತ್ವದಲ್ಲಿ ಅಧ್ಯಯನ ನಡೆಸಿರುವ ಸಂಶೋಧಕರ ತಂಡವು ಮಾನವ ದೇಹದ ಸುದೀರ್ಘಕಾಲ ಜೀವಿಸುವ ಸ್ಮರಣ ಜೀವಕೋಶಗಳಲ್ಲಿ ವೈರಸ್ ಅಡಗಿರುವುದನ್ನು ಪತ್ತೆ ಹಚ್ಚಿದೆ.

ಸ್ಟೆಮ್ ಸೆಲ್‌ಗಳಂತೆ ಮೆಮೊರಿ ಸೆಲ್‌ಗಳು ಸುದೀರ್ಘವಾಗಿ ಬಾಳುತ್ತವೆ. ಹೊಸ ವೈರಸ್ ಅಥವಾ ಖಾಯಿಲೆಯು ದಾಳಿ ಮಾಡುವ ತನಕ ಈ ಸೆಲ್ ನಿದ್ರಿಸುತ್ತದೆ. ಇವುಗಳು ತಮ್ಮಷ್ಟಕ್ಕೆ ಹೆಚ್ಚುತ್ತವೆ. ಹಾಗಾಗಿ ಏಡ್ಸ್ ವೈರಸ್‌ಗಳ ಪ್ರವೇಶವಾದಾಗ ಅಥವಾ ದಾಳಿ ನಡೆಸಿದಾಗ, ಸ್ಮರಣ ಜೀವಕೋಶಗಳು ತಮ್ಮನ್ನು ರಕ್ಷಿಸಿಕೊಳ್ಳಲು ಬಹುವಾಗಿ ಪರಿವರ್ತಿತವಾಗುತ್ತವೆ.

ಆದರೆ ಸಮಸ್ಯೆ ಎಂದರೆ, ಮೆಮೊರಿ ಸೆಲ್‌ಗಳಿಗೆ ಪ್ರವೇಶಗೊಂಡಿರುವ ಏಡ್ಸ್ ವೈರಸ್‌ಗಳೂ ಸಹ ಬಹುಸಂಖ್ಯೆಯಲ್ಲಿ ಪರಿವರ್ತಿತವಾಗುತ್ತವೆ.

ಏಡ್ಸ್‌ಗೆ ಪ್ರಸಕ್ತ ಚಾಲ್ತಿಯಲ್ಲಿರುವ ಔಷಧವು ಏಡ್ಸ್ ರೋಗಿಯ ಜೀವನವನ್ನು 13 ವರ್ಷಗಳ ಕಾಲ ಮುಂದೂಡುವ ಸಾಮರ್ಥ್ಯಹೊಂದಿದೆ ಅಷ್ಟೆ. ಬಳಿಕ ಈ ವೈರಸ್‌ಗಳು ಮತ್ತೆ ಆಕ್ರಮಣ ಮಾಡುತ್ತವೆ.

ಇದೀಗ ರೋಗನಿರೋಧಕ ವ್ಯವಸ್ಥೆಗೆ ಹಾನಿಯಾಗದಂತೆ, ಈ ವೈರಸ್‌ಗಳನ್ನು ನಾಶಪಡಿಸಲು ದಾರಿಗಳನ್ನು ಪತ್ತೆ ಮಾಡುತ್ತಿರುವುದಾಗಿ ಸಂಶೋಧಕರು ಹೇಳಿದ್ದಾರೆ.

ಏಡ್ಸ್ ವೈರಸನ್ನು ತೊಡೆದು ಹಾಕಲು ಪ್ರಸಕ್ತ ಸಂಶೋಧನೆಯು ಮೊದಲ ಸುಳಿವು ಎಂಬುದಾಗಿ ಪ್ರೋ. ಸೆಕಾಲಿ ಹೇಳುತ್ತಾರೆ.

ವಿಶ್ವಾದ್ಯಂತ 33 ದಶಲಕ್ಷ ಮಂದಿಗಿಂತಲೂ ಅಧಿಕ ಮಂದಿ ಏಡ್ಸ್ ಪೀಡಿತರಾಗಿದ್ದಾರೆ. ಪ್ರತೀವರ್ಷ ಸುಮಾರು 2.7ಲಕ್ಷಕ್ಕಿಂತಲೂ ಅಧಿಕ ಮಂದಿ ಈ ಪೀಡೆಗೆ ಬಲಿಯಾಗುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ