ಬರುತ್ತಿದೆ... ಬೊಕ್ಕತಲೆಗೊಂದು ಕ್ಯಾಲ್ಕುಲೇಟರ್!

PTI
ಕೂದಲುದುರುವಿಕೆ ಇದ್ದದ್ದೇ. ಹೆಚ್ಚೂಕಡಿಮೆ ಪ್ರತಿಯೊಬ್ಬರನ್ನೂ ಕಾಡುವ ಸಮಸ್ಯೆಯಿದು. ಕೂದಲುದುರುವುದು ಹೆಚ್ಚಾಗುತ್ತಾ, ತಲೆಯೇ ಬೋಳಾಗುವ ಹಂತ ತಲುಪುವಾಗ ಆತಂಕ ಗರಿಗೆದರಿಕೊಳ್ಳುತ್ತದೆ. ಇಂಥ ಕೂದಲುದುರುವಿಕೆಯ ಲೆಕ್ಕಾಚಾರ ಹಾಕುವ ತಂತ್ರಾಂಶವೊಂದನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ.

ಜರ್ಮನ್ ವಿಜ್ಞಾನಿಗಳು ಸಂಶೋಧಿಸಿರುವ ಈ ಬೋಳುತನದ ಕ್ಯಾಲ್ಕುಲೇಟರ್, ಯಾವ ವಯಸ್ಸಿನಲ್ಲಿ ವ್ಯಕ್ತಿಯೊಬ್ಬನ ತಲೆ ಸಂಪೂರ್ಣ ಬೋಳಾಗುತ್ತದೆ, ಯಾವ ವಯಸ್ಸಿನಲ್ಲಿ ಹೆಚ್ಚಿನ ಕೂದಲುಗಳು ಉದುರಿದವು ಎಂಬುದನ್ನು ನಿಖರವಾಗಿ ಲೆಕ್ಕ ಮಾಡಿ ಹೇಳಬಲ್ಲುದು ಮತ್ತು ಯಾರಿಗೆಲ್ಲ ವೃದ್ಧಾಪ್ಯದಲ್ಲಿಯೂ ತಲೆತುಂಬಾ ಕೂದಲುಗಳಿರುತ್ತವೆ ಎಂಬುದನ್ನೂ ಹೇಳುತ್ತಾ ಭೀತಿ ನಿವಾರಿಸಬಲ್ಲುದು.

ತಲೆಯ ಕೂದಲುದುರುವುದರಿಂದ ತಲೆ ಕೆಡಿಸಿಕೊಳ್ಳುವವರಿಗೆ ಇದೊಂದು ವರದಾನದಂತೆ. ವಿಶೇಷವಾಗಿ ಯುವಜನಾಂಗದಲ್ಲಿಯೂ ಕೂದಲುದುರುವಿಕೆ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದು, ಅವರಿಗೆ ತಮ್ಮ ಕೂದಲಿನ ಭವಿಷ್ಯ ತಿಳಿದುಕೊಳ್ಳಲು, ಆ ಮೂಲಕ ಮುನ್ನೆಚ್ಚರಿಕೆ ತೆಗೆದುಕೊಳ್ಳಲು ಪೂರಕವಾಗುತ್ತದೆ ಎನ್ನುತ್ತಾರೆ ಇದನ್ನು ಸಂಶೋಧಿಸಿದ ಡಾ.ಕುರ್ಟ್ ವಾಲ್ಫ್ ತಂಡದ ಮುಖ್ಯಸ್ಥ ಡಾ.ಅಡಾಲ್ಫ್ ಕ್ಲೆಂಕ್.

ಹಣೆಯ ಎರಡೂ ಭಾಗಗಳಲ್ಲಿ ಕೂದಲಿನ ಪ್ರಮಾಣ ಕಡಿಮೆಯಾಗತೊಡಗುವುದರೊಂದಿಗೆ ಪುರುಷರಲ್ಲಿ ಬೋಳು ತಲೆಯ ಸಮಸ್ಯೆ ಕಾಣಿಸಿಕೊಳ್ಳಲಾರಂಭಿಸುತ್ತದೆ. 20 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರಲ್ಲಿ ಇದು ಸಾಮಾನ್ಯ. ಇದನ್ನು ಹದಿ ಹರೆಯದ ಕೊನೆಯ ದಿನಗಳಲ್ಲಿಯೂ ಗುರುತಿಸಬಹುದಾಗಿದೆ.

ಪುರುಷರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ಈ ಬಾಲ್ಡ್‌ನೆಸ್ ಕ್ಯಾಲ್ಕುಲೇಟರ್ ಎಂಬ ಕಂಪ್ಯೂಟರ್ ಪ್ರೋಗ್ರಾಂ ಸಿದ್ಧಪಡಿಸಿದ್ದೇವೆ ಎಂದು ಡಾ.ಅಡಾಲ್ಫ್ ಕ್ಲೆಂಕ್ ಹೇಳಿರುವುದಾಗಿ ಲಂಡನ್‌ನ ಡೈಲಿ ಟೆಲಿಗ್ರಾಫ್ ವರದಿ ಮಾಡಿದೆ.

ಈ ಕಂಪ್ಯೂಟರ್ ಪ್ರೋಗ್ರಾಮು, ನಿಮ್ಮ ವಯಸ್ಸು, ವೈವಾಹಿಕ ಸ್ಥಿತಿ, ಉದ್ಯೋಗ, ಎಲ್ಲಿ ವಾಸಿಸುತ್ತೀರಿ, ಈಗಿನ ಕೂದಲಿನ ಪ್ರಮಾಣ, ಕುಟುಂಬದಲ್ಲಿ ಬೋಳುತಲೆ ಇತಿಹಾಸ ಮತ್ತು ಮಾನಸಿಕ ಒತ್ತಡ ಇತ್ಯಾದಿ ಕುರಿತು ಮಾಹಿತಿ ಕಲೆ ಹಾಕುತ್ತದೆ.

ವಂಶಪಾರಂಪರ್ಯ ಬೋಳುತಲೆಯು ಇಂದಿನ ಜನಾಂಗದಲ್ಲಿಯೂ ಕೂದಲುದುರಲು ಪ್ರಧಾನ ಕಾರಣ. ವಿಚ್ಛೇದನೆ ಅಥವಾ ಸಮೀಪದ ಸಂಬಂಧಿಯ ಸಾವು ಮುಂತಾದ ತೀಕ್ಷ್ಣವಾದ, ದೀರ್ಘಕಾಲಿಕ ಮಾನಸಿಕ ಒತ್ತಡದಿಂದ ಬಳಲಿದರೂ ಕೂದಲುದುರುವುದು ಹೆಚ್ಚು ಎಂದಿದ್ದಾರೆ ಡಾ.ಕ್ಲೆಂಕ್.

ಆದರೆ, ಈ ತಂತ್ರಾಂಶದಿಂದಾಗಿ ತನ್ನ ತಲೆ ಬೋಳಾಗುತ್ತದೆ ಎಂಬ ಕುರಿತ ಜಾಗತಿಕ ಭೀತಿ ಮತ್ತಷ್ಟು ಹೆಚ್ಚಾದೀತು ಎಂಬುದು ಇನ್ನು ಕೆಲವು ವಿಜ್ಞಾನಿಗಳ ಅಭಿಮತ.

ವೆಬ್ದುನಿಯಾವನ್ನು ಓದಿ