ಜನರ ಕಲುಷಿತ ಮನಸ್ಸು ಕ್ಲೀನ್ ಮಾಡಲು ಉಪವಾಸ: ಮಹಿಮಾ ಪಕ್ಷ

ಸೋಮವಾರ, 14 ಏಪ್ರಿಲ್ 2008 (11:27 IST)
ರಾಜ್ಯ ಚುನಾವಣೆಗೆ ರಾಜಕೀಯ ಪಕ್ಷಗಳ ಕಸರತ್ತು ಪ್ರಾರಂಭವಾಗಿದೆ. ಮತದಾರರನ್ನು ತಮ್ಮತ್ತ ಸೆಳೆಯುವ ನಿಟ್ಟಿನಲ್ಲಿ ವಿವಿಧ ಪಕ್ಷಗಳು ನಾನಾ ಪ್ರಯೋಗಗಳಿಗೆ ಮೊರೆ ಹೋಗಿವೆ. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ರಾಜ್ಯದ ಮೂಲೆ ಮೂಲೆಗಳಲ್ಲಿ ಜನಾಂದೋಲನದ ಮೂಲಕ ಅಧಿಕಾರ ಪಡೆಯಲು ಹವಣಿಸುತ್ತಿದ್ದರೆ, ಮಹಿಮಾ ಪಟೇಲ್ ನೇತೃತ್ವದ ಸ್ವರ್ಣಯುಗ ಪಕ್ಷ ವಿನೂತನ ರೀತಿಯಲ್ಲಿ ಪ್ರಚಾರ ಕೈಗೊಂಡಿದೆ.

ನಾಮಪತ್ರ ಸಲ್ಲಿಸಿದ ಬಳಿಕ ಜನರ ಒಳಿತು ಹಾಗೂ ಸಮಾಜದ ಪರಿಶುದ್ಧತೆಗಾಗಿ ಫಲಿತಾಂಶ ಬರುವವರೆಗೆ ಉಪವಾಸ ಕುಳಿತುಕೊಳ್ಳಲು ಮಹಿಮಾ ಪಟೇಲ್ ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಏಪ್ರಿಲ್ 28ರಂದು ಚನ್ನಗಿರಿ ಕ್ಷೇತ್ರದಿಂದ ವಿಧಾನಸಭೆಗೆ ನಾಮಪತ್ರ ಸಲ್ಲಿಸಿ ಉಪವಾಸ ಕುಳಿತುಕೊಳ್ಳಲಿದ್ದು, ಮೇ 25ರವರೆಗೆ ಮುಂದುವರಿಸಲಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಈ ವಿಷಯ ಪ್ರಕಟಿಸಿದ ಮಹಿಮಾ, ಚುನಾವಣೆಯಲ್ಲಿ ಆಗುವ ಗಲಾಟೆಯಿಂದಾಗಿ ಪರಿಸರ ಹಾಗೂ ಜನರ ಮನಸ್ಸು ಕಲುಷಿತಗೊಳ್ಳುತ್ತದೆ. ಅವುಗಳನ್ನು ಶುದ್ದೀಕರಿಸಲು ಉಪವಾಸ ಕೈಗೊಳ್ಳುವುದಾಗಿ ವಿವರಣೆ ನೀಡಿದರು.

ಇದೇ ಸಂದರ್ಭದಲ್ಲಿ ನೂತನ ಪಕ್ಷದ ಕುರಿತು ಮಾತನಾಡಿದ ಅವರು, ಪಕ್ಷದ ಅಭ್ಯರ್ಥಿಗಳಿಗೆ ಚುನಾವಣೆಯಲ್ಲಿ ಮೆಕ್ಕೆಜೋಳದ ತೆನೆ ಚಿಹ್ನೆ ನೀಡುವಂತೆ ಚುನಾವಣಾ ಆಯೋಗವನ್ನು ಕೋರಲಾಗಿದೆ. ಇದು ಪಕ್ಷದ ಅಧಿಕೃತ ಚಿಹ್ನೆಯಾಗಲಿದೆ ಎಂದು ತಿಳಿಸಿದರು.

ಪಕ್ಷದ ಪ್ರಣಾಳಿಕೆ ಕುರಿತು ಮಾತನಾಡಿದ ಅವರು, ರಾಜಕೀಯ ಪಕ್ಷಗಳು ಜನತೆಯ ಮತಕ್ಕಾಗಿ ಪ್ರಣಾಳಿಕೆಯನ್ನು ಹೊರತರುತ್ತವೆ. ಆದರೆ ಅದರಲ್ಲಿ ಜಾರಿಯಾಗುವುದು ಮಾತ್ರ ಕಡಿಮೆ. ಈ ನಿಟ್ಟಿನಲ್ಲಿ ಸ್ವರ್ಣಯುಗ ಯಾವುದೇ ಪ್ರಣಾಳಿಕೆಯನ್ನು ಜನತೆಗೆ ನೀಡುವುದಿಲ್ಲ ಎಂದು ತಿಳಿಸಿದರು.

ವೆಬ್ದುನಿಯಾವನ್ನು ಓದಿ