ಭಾರತದ ಅಭಿಮಾನಿಗಳ ಕ್ಷಮೆಯಾಚಿಸಿದ ಧೋನಿ

ಸೋಮವಾರ, 15 ಜೂನ್ 2009 (10:34 IST)
ಟೀಮ್ ಇಂಡಿಯಾ ಟ್ವೆಂಟಿ-20 ವಿಶ್ವಕಪ್‌ನಿಂದ ಹೊರ ಬಿದ್ದುದರಿಂದ ನಿರಾಸೆಗೊಂಡ ಭಾರತೀಯರಿಂದ ನಾಯಕ ಮಹೇಂದ್ರ ಸಿಂಗ್ ಧೋನಿ ಕ್ಷಮೆ ಯಾಚಿಸಿದ್ದಾರೆ. ಮುಂದಿನ ವರ್ಷ ವೆಸ್ಟ್‌ಇಂಡೀಸ್‌ನಲ್ಲಿ ನಡೆಯಲಿರುವ ಕೂಟದಲ್ಲಿ ಸೇಡು ತೀರಿಸಿಕೊಳ್ಳುವ ಭರವಸೆಯನ್ನು ಅವರು ಇದೇ ಸಂದರ್ಭದಲ್ಲಿ ನೀಡಿದ್ದಾರೆ.

ಹಾಲಿ ಚಾಂಪಿಯನ್ ಭಾರತವು ಭಾನುವಾರ ಲಾರ್ಡ್ಸ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮಾಡು ಇಲ್ಲವೇ ಮಡಿ ಸೂಪರ್ ಎಂಟರ ಎರಡನೇ ಪಂದ್ಯದಲ್ಲಿ ಮೂರು ರನ್ನುಗಳಿಂದ ಸೋತಿತ್ತು. ತನ್ನ ಮೊದಲ ಪಂದ್ಯವನ್ನು ಭಾರತ ವೆಸ್ಟ್‌ಇಂಡೀಸ್ ಎದುರು ಶುಕ್ರವಾರ ಕಳೆದುಕೊಂಡಿತ್ತು.
PTI

"ಹೀಗಾಗಿರುವುದಕ್ಕೆ ನಮ್ಮನ್ನು ಕ್ಷಮಿಸಿ. ಆದರೆ ನಾವು ನಮ್ಮಿಂದ ಸಾಧ್ಯವಾಗುವಷ್ಟು ಉತ್ತಮವಾದ ಆಟವನ್ನೇ ನೀಡಿದ್ದೇವೆ" ಎಂದು ಪಂದ್ಯದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಧೋನಿ ತಿಳಿಸಿದರು.

"ಒತ್ತಡವನ್ನು ನಿಭಾಯಿಸುವ ಸಾಮರ್ಥ್ಯ ಹೊಂದಿರುವ ಆಟಗಾರರು ನಮ್ಮಲ್ಲಿದ್ದರು. ಆದರೆ ಈ ದಿನ ಮಾತ್ರ ನಮ್ಮ ಪಾಲಿಗೆ ಯಾವುದೇ ಸಹಾಯ ಮಾಡಲಿಲ್ಲ" ಎಂದು ಶೂನ್ಯದತ್ತ ಆರೋಪಿಸುತ್ತಾ ನಾಯಕ ಕೈ ಚೆಲ್ಲಿದ್ದಾರೆ.

ಆದರೆ 2010ರ ಏಪ್ರಿಲ್‌ನಲ್ಲಿ ವೆಸ್ಟ್‌ಇಂಡೀಸ್ ನೆಲದಲ್ಲಿ ನಡೆಯಲಿರುವ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ತಿರುಗಿ ಬೀಳುವ ವಿಶ್ವಾಸವನ್ನು ಅವರು ಇದೇ ಸಂದರ್ಭದಲ್ಲಿ ವ್ಯಕ್ತಪಡಿಸಿದ್ದಾರೆ.

"ಅಲ್ಲಿ ನಮ್ಮ ಸಾಮರ್ಥ್ಯವನ್ನು ಖಂಡಿತಾ ಸಾಬೀತುಪಡಿಸಲಿದ್ದೇವೆ. ನಾವು ನಿರೀಕ್ಷೆಯನ್ನು ತಲುಪಲಿಲ್ಲ, ನಿಜ. ಆದರೆ ಇನ್ನು ಒಂಬತ್ತು ತಿಂಗಳ ನಂತರ ಮತ್ತೊಂದು ವಿಶ್ವಕಪ್ ಎದುರಾಗಲಿದೆ-- ಅದೊಂದೇ ನಾವೀಗ ನೀಡಬಹುದಾದ ಬಹುದೊಡ್ಡ ಭರವಸೆ" ಎಂದರು.

"ನೀವು ಅತ್ಯುತ್ತಮ ಆಟವಾಡುತ್ತಿರುವಾಗ ಕ್ರಿಕೆಟ್ ನಿಮ್ಮ ವ್ಯಕ್ತಿತ್ವವನ್ನು ಅಳತೆ ಮಾಡುವುದಿಲ್ಲ. ನೀವು ಏನೂ ಮಾಡದೇ ಇದ್ದಾಗ ಅದು ಪರೀಕ್ಷೆ ನಡೆಸುತ್ತದೆ. ಬಹುಶಃ ನಮಗೀಗ ಇದು ಪರೀಕ್ಷೆಯ ಕಾಲ. ಆದರೆ ಇದು ನಮ್ಮ ಅಂತ್ಯವಲ್ಲ" ಎಂದು ಧೋನಿ ಫಲಿತಾಂಶದ ಪರಿಣಾಮದ ಬಗ್ಗೆ ಪರೋಕ್ಷವಾಗಿ ವಿಶ್ಲೇಷಣೆ ನಡೆಸಿದ್ದಾರೆ.

"ನಾವು 2007ರ ವಿಶ್ವಕಪ್‌ನಲ್ಲಿ ಸೋತಿದ್ದೆವು. ಅದೂ 50 ಓವರುಗಳಲ್ಲಿ. ಅದು ನನ್ನ ಕ್ರಿಕೆಟ್ ಜೀವನದ ಕೆಟ್ಟ ಭಾಗವಾಗಿತ್ತು. ಈಗ ಕಂಡಿರುವ ಸೋಲು ಕೂಡ ನಿರಾಸೆ ತಂದಿದೆ. ಆದರೆ 50 ಓವರುಗಳ ವಿಶ್ವಕಪ್ ಸೋಲಿನ ಹತ್ತಿರ ಬರುವಂತದ್ದಲ್ಲ" ಎಂದು ಎರಡು ವಿಶ್ವಕಪ್‌ಗಳ ಸೋಲನ್ನು ಅವರು ತುಲನೆ ಮಾಡಿದರು.

ಭದ್ರತಾ ಕಾರಣಗಳಿಂದ ದಕ್ಷಿಣ ಆಫ್ರಿಕಾಕ್ಕೆ ಸ್ಥಳಾಂತರಗೊಂಡಿದ್ದ ಸುದೀರ್ಘಾವಧಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಟೂರ್ನಮೆಂಟ್‌ ತಂಡದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ ಎಂಬ ಅಭಿಪ್ರಾಯಗಳನ್ನು ಇದೇ ಸಂದರ್ಭದಲ್ಲಿ ಅವರು ತಳ್ಳಿ ಹಾಕಿದರು.