Vaikunta Ekadashi: ವೈಕುಂಠ ಏಕಾದಶಿ ಮುಹೂರ್ತ, ಪೂಜಾ ಸಮಯ ವಿವರ ಇಲ್ಲಿದೆ

Krishnaveni K

ಗುರುವಾರ, 9 ಜನವರಿ 2025 (17:08 IST)
ಬೆಂಗಳೂರು: ನಾಳೆ ಅಂದರೆ ಜನವರಿ 10 ರಂದು ಹಿಂದೂಗಳ ಪವಿತ್ರ ವೈಕುಂಠ ಏಕಾದಶಿ ಹಬ್ಬವಾಗಿದ್ದು ಯಾವ ಸಮಯದಲ್ಲಿ ಪೂಜೆ ಮಾಡಬೇಕು, ಮುಹೂರ್ತ ಯಾವುದು ಎಂಬ ವಿವರ ಇಲ್ಲಿದೆ ನೋಡಿ.

ನಾಳೆ ಏಕಾದಶಿ ತಿಥಿಯಾಗಿದ್ದು ಕೃತ್ತಿಕಾ ನಕ್ಷತ್ರವಾಗಿದೆ. ವೈಕುಂಠ ಏಕಾದಶಿಯನ್ನು ವಿಶೇಷವಾಗಿ ಮಹಾವಿಷ್ಣುವಿನ ಆರಾಧನೆಗೆ ಮೀಸಲಾಗಿಡಲಾಗಿದೆ. ಇಂದು ಭಗವಾನ್ ಮಹಾವಿಷ್ಣುವು ವೈಕುಂಠ ದ್ವಾರವನ್ನು ತೆರೆದು ಭಕ್ತರಿಗೆ ದರ್ಶನ ಕೊಡುತ್ತಾನೆ ಎಂಬ ನಂಬಿಕೆಯಿದೆ. ಈ ದಿನ ಮಹಾವಿಷ್ಣುವನ್ನು ಕುರಿತು ಪ್ರಾರ್ಥನೆ ಮಾಡುವುದರಿಂದ ನಮ್ಮ ಪಾಪಗಳು ಪರಿಹಾರವಾಗಿ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ. ವಿಶೇಷವಾಗಿ ದೇವಾಲಯಗಳಲ್ಲಿ ವೈಕುಂಠ ದ್ವಾರವನ್ನು ಇಡಲಾಗುತ್ತದೆ. ಈ ದ್ವಾರದ ಮೂಲಕ ಹಾದು ಭಗವಂತನನ್ನು ನಮಸ್ಕರಿಸಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ.

ವೈಕುಂಠ ಏಕಾದಶಿಯನ್ನು ಪ್ರಾತಃಕಾಲದಿಂದ ರಾತ್ರಿಯವರೆಗೆ ಉಪವಾಸವಿದ್ದು ಆಚರಿಸಲಾಗುತ್ತದೆ. ಬ್ರಾಹ್ಮಿ ಮುಹೂರ್ತದಲ್ಲೇ ಎದ್ದು ಎಣ್ಣೆ ಹಚ್ಚಿ ಮಡಿ ಸ್ನಾನ ಮಾಡಬೇಕು. ಬಳಿಕ ಮಹಾವಿಷ್ಣುವಿಗೆ ಪೂಜೆ ಮಾಡಬೇಕು.

ಶುಭ ಮುಹೂರ್ತ ಯಾವಾಗ?
ಇಂದು ಮಧ್ಯಾಹ್ನ 12.22 ರಿಂದ ವೈಕುಂಠ ಏಕಾದಶಿ ಮುಹೂರ್ತ ಪ್ರಾರಂಭವಾಗುತ್ತದೆ. ನಾಳೆ ಬೆಳಿಗ್ಗೆ 10.19 ಕ್ಕೆ ವೈಕುಂಠ ಏಕಾದಶಿ ತಿಥಿ ಮುಕ್ತಾಯವಾಗುತ್ತದೆ. ಈ ದಿನ ಬೆಳಿಗ್ಗೆಯೇ ಮಹಾವಿಷ್ಣುವಿಗೆ ವಿಶೇಷವಾಗಿ ತುಳಸಿಯಿಂದ ಅಲಂಕಾರ ಮಾಡಿ ದೀಪ, ಧೂಪ ಹಚ್ಚಿ ‘ಓಂ ನಮೋ ಭಗವತೇ ವಾಸುದೇವಾಯ’ ಎಂಬ ಮಂತ್ರದೊಂದಿಗೆ ಆರತಿ ಬೆಳಗಿ ಪೂಜೆ ಮಾಡಬೇಕು. ಬಳಿಕ ಇಡೀ ದಿನ ಉಪವಾಸವಿದ್ದು ದೇವಾಲಯಕ್ಕೆ ಹೋಗಿ ಪ್ರಸಾದ ಸ್ವೀಕರಿಸಿ. ದಿನವಿಡೀ ಮಹಾವಿಷ್ಣುವಿನ ಆರಾಧನೆಯಲ್ಲಿ ತೊಡಗಿಕೊಂಡರೆ ಶ್ರೇಯಸ್ಕರವಾಗುವುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ