ಬೆಂಗಳೂರು: ಲಾಕ್ ಡೌನ್ ನಿಧಾನವಾಗಿ ತೆರೆಯುವುದರ ಬಗ್ಗೆ ರಾಜ್ಯ ಸರ್ಕಾರ ತೀರ್ಮಾನಿಸುತ್ತಿರುವ ಬೆನ್ನಲ್ಲೇ ಕೇವಲ ಐಟಿ-ಬಿಟಿಯವರನ್ನು ಮಾತ್ರ ಕೇಂದ್ರವಾಗಿಸಿ ನಿರ್ಧಾರ ಕೈಗೊಳ್ಳುತ್ತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಕೆಲವರು ಆರೋಪಿಸಿದ್ದಾರೆ.
ಜುಲೈ 31 ರವರೆಗೂ ಐಟಿ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಅವಕಾಶ ನೀಡಬೇಕು ಎಂದು ರಾಜ್ಯ ಸರ್ಕಾರ ಆದೇಶಿಸಿದ್ದಕ್ಕೆ ಕೆಲವರು ಸಾಮಾಜಿಕ ಜಾಲತಾಣದ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇವಲ ಐಟಿ-ಬಿಟಿಯವರು ಮಾತ್ರ ಉದ್ಯೋಗಿಗಳೇ? ನಮ್ಮಂತಹ ಸಾಮಾನ್ಯ ಕಂಪನಿಗಳಲ್ಲಿ ಕೆಲಸ ಮಾಡುವವರ ಗತಿಯೇನು? ನಾವು ಏನು ಮಾಡಬೇಕು? ನಮ್ಮ ಜೀವನ ನಿರ್ವಹಣೆ ಹೇಗೆ ಎಂದು ಸರ್ಕಾರ ಹೇಳಲಿ ಎಂದು ಹಲವರು ಸಾಮಾಜಿಕ ಜಾಲತಾಣದ ಮೂಲಕ ಆಗ್ರಹಿಸಿದ್ದಾರೆ.
ಕೆಲವು ಕಂಪನಿಗಳು ಈಗಾಗಲೇ ಉದ್ಯೋಗಿಗಳಿಗೆ ವಾಹನ ಸೌಕರ್ಯವೊದಗಿಸಿ ಕೆಲಸಕ್ಕೆ ಕರೆಸಿಕೊಳ್ಳುತ್ತಿವೆ. ಆದರೆ ವ್ಯವಸ್ಥೆ ಮಾಡುವಷ್ಟು ಅನುಕೂಲವಿಲ್ಲದ ಕಂಪನಿಗಳ ನೌಕರರು ಭವಿಷ್ಯದ ಚಿಂತೆಯಲ್ಲಿದ್ದಾರೆ.