ಲಾಕ್ ಡೌನ್ ಸಡಿಲವಾಗುತ್ತಿದ್ದಂತೇ ಕೊರೋನಾವನ್ನೇ ಮರೆತ ಜನರು!
ಬುಧವಾರ, 6 ಮೇ 2020 (08:54 IST)
ಬೆಂಗಳೂರು: ಎಷ್ಟು ದಿನಗಳಾಗಿತ್ತು ಹೊರಬಂದು.. ಎಂದಿನಂತೆ ಕಚೇರಿಗೆ ತೆರಳಿ..! ಅಂತೂ ಲಾಕ್ ಡೌನ್ ನಿಯಮ ಸಡಿಲಿಕೆಯಾಗಿದೆ ಎಂದು ಸರ್ಕಾರ ಘೋಷಿಸುತ್ತಿದ್ದಂತೇ ಜನರೂ ಮೈಮರೆತಿದ್ದಾರೆ.
ದಿನಾ ಸಾಯೋರಿಗೆ ಅಳುವವರು ಯಾರು ಅಂತಾರಲ್ಲ? ಹಾಗೆಯೇ ಕೊರೋನಾ ಎಂದು ಎಷ್ಟು ದಿನ ಕೊರಗುತ್ತಾ ಮನೆಯಲ್ಲೇ ಕೂರುವುದು? ಲಾಕ್ ಡೌನ್ ಸಡಿಲಿಕೆಯಾಗುತ್ತಿದ್ದಂತೇ ಅಂಗಡಿ-ಕಚೇರಿಗಳು ಪುನರಾರಂಭವಾಗಿದ್ದು, ಜಗತ್ತು ನಿಧಾನವಾಗಿ ಸಾಮಾನ್ಯ ವ್ಯವಹಾರದಲ್ಲಿ ತೊಡಗಿಸಿಕೊಂಡಿದೆ.
ಎಷ್ಟೋ ದಿನಗಳ ನಂತರ ಹೊರ ಬಂದ ಖುಷಿಗೆ ಜನ ಕೊರೋನಾವನ್ನೂ ಮರೆತಿದ್ದು, ಸಾಮಾಜಿಕ ಅಂತರಕ್ಕೂ ತಿಲಾಂಜಲಿಯಿಟ್ಟಿದ್ದಾರೆ. ಆದರೆ ಕೊರೋನಾ ಆತಂಕ ಇನ್ನೂ ಕಡಿಮೆಯಾಗಿಲ್ಲ ಎಂಬುದನ್ನು ಜನ ಅರ್ಥ ಮಾಡಿಕೊಳ್ಳಬೇಕು. ಹೊರಗೆ ಹೋಗಲು ಅವಕಾಶ ಮಾಡಿಕೊಟ್ಟಿದ್ದಾರೆಂದು ಬೇಕಾಬಿಟ್ಟಿ ತಿರುಗಿದರೆ ಮತ್ತೊಂದು ಲಾಕ್ ಡೌನ್ ಅನಿವಾರ್ಯವಾಗಲಿದೆ. ಜತೆಗೆ ಕೊರೋನಾ ಪ್ರಕರಣಗಳೂ ಹೆಚ್ಚಲಿವೆ. ಹೀಗಾಗಿ ನಮ್ಮ ಎಚ್ಚರಿಕೆಯಲ್ಲಿ ನಾವಿದ್ದರೆ ಉತ್ತಮ.