ಜೈಸ್ವಾಲ್‌ ಅಬ್ಬರ, ಬೃಹತ್ ಮೊತ್ತದತ್ತ ಭಾರತ: ಆಸ್ಟ್ರೇಲಿಯಾ ವಿರುದ್ಧ ಹಿಡಿತ ಸಾಧಿಸಿದ ಬೂಮ್ರಾ ಪಡೆ

Sampriya

ಭಾನುವಾರ, 24 ನವೆಂಬರ್ 2024 (12:15 IST)
Photo Courtesy X
ಪರ್ತ್‌: ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಹಿಡಿತ ಸಾಧಿಸಿದ್ದು, ಗೆಲುವಿನ ಹೊಸ್ತಿಲಲ್ಲಿದೆ.

ಮೂರನೇ ದಿನದಾಟದ ಆರಂಭದಲ್ಲೇ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿರುವ ಯಶಸ್ವಿ ಜೈಸ್ವಾಲ್ ಶತಕ ಸಿಡಿಸಿ ಮಿಂಚಿದ್ದಾರೆ. ಈ ಶತಕದೊಂದಿಗೆ ಭಾರತ ತಂಡವು 5 ವಿಕೆಟ್‌ಗೆ 350 ರನ್​ಗಳನ್ನು ಪೂರೈಸಿದೆ. ಅಲ್ಲದೆ ಮೊದಲ ಇನಿಂಗ್ಸ್​ನಲ್ಲಿನ 46 ರನ್​ಗಳ ಮುನ್ನಡೆಯೊಂದಿಗೆ  ಒಟ್ಟು 396 ರನ್‌ ಮುನ್ನಡೆ ಪಡೆದು ಎದುರಾಳಿ ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿದೆ.

ಭಾರತ ತಂಡದ ಸ್ಕೋರ್ 350ರ ಗಡಿದಾಟುತ್ತಿದ್ದಂತೆ ಅತ್ತ ಆಸ್ಟ್ರೇಲಿಯಾ ತಂಡಕ್ಕೆ ಸೋಲಿನ ಭೀತಿ ಎದುರಾಗಿರುವುದು ಸುಳ್ಳಲ್ಲ. ಏಕೆಂದರೆ ಟೆಸ್ಟ್ ಕ್ರಿಕೆಟ್​ನಲ್ಲಿ ಬಲಿಷ್ಠ ತಂಡ ಎನಿಸಿಕೊಂಡರೂ ಆಸೀಸ್ ಪಡೆ ತವರಿನಲ್ಲಿ ಬೃಹತ್ ಮೊತ್ತದ ಚೇಸಿಂಗ್​ ವಿಷಯದಲ್ಲಿ ಈಗಲೂ ಹಿಂದುಳಿದಿದೆ.  

ಆಸ್ಟ್ರೇಲಿಯಾ ತಂಡವು ತವರಿನಲ್ಲಿ 350+ ರನ್​ಗಳನ್ನು ಚೇಸ್ ಮಾಡಿ ಗೆದ್ದು 25 ವರ್ಷಗಳೇ ಕಳೆದಿವೆ. ಇದೀಗ ಭಾರತದ ವಿರುದ್ಧ ಮೊದಲ ಇನಿಂಗ್ಸ್​ನಲ್ಲಿ ಕೇವಲ 104 ರನ್​ಗಳಿಗೆ ಮುಗ್ಗರಿಸಿರುವ ಆಸೀಸ್ ಪಡೆಗೆ ಟೀಮ್ ಇಂಡಿಯಾ 450+ ರನ್​ಗಳ ಬೃಹತ್ ಮೊತ್ತದ ಗುರಿ ನೀಡುವುದು ಖಚಿತ.

ಈ ಗುರಿಯೊಂದಿಗೆ ಭಾರತ ತಂಡವು ಕೊನೆಯ ಎರಡು ದಿನದಾಟಗಳಲ್ಲಿ ಪಂದ್ಯವನ್ನು ಗೆಲ್ಲಲು ಪ್ರಯತ್ನಿಸಿದರೆ, ಆಸ್ಟ್ರೇಲಿಯಾ ತಂಡವು ಡ್ರಾ ಮಾಡಿಕೊಳ್ಳಲು ಯತ್ನಿಸಲಿದೆ. ಈ ಯತ್ನ ಪ್ರಯತ್ನಗಳ ನಡುವೆ ಭರ್ಜರಿ ಬೌಲಿಂಗ್ ಸಂಘಟಿಸಿದರೆ ಟೀಮ್ ಇಂಡಿಯಾ ಗೆಲುವು ನಿಶ್ಚಿತ. ಸದ್ಯ ವಿರಾಟ್‌ ಕೊಹ್ಲಿ ಮತ್ತು ವಾಷಿಂಗ್ಟನ್‌ ಸುಂದರ್‌ ಕ್ರೀಸ್‌ನಲ್ಲಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ