ಏಷ್ಯಾ ಕಪ್ ಕ್ರಿಕೆಟ್: ಲಂಕಾ ವಿರುದ್ಧ ಸೋಲಿನ ಬಳಿಕ ಟೀಂ ಇಂಡಿಯಾ ಆಯ್ಕೆ ಬಗ್ಗೆ ಭಾರೀ ಟೀಕೆ

ಬುಧವಾರ, 7 ಸೆಪ್ಟಂಬರ್ 2022 (08:10 IST)
ದುಬೈ: ಏಷ್ಯಾ ಕಪ್ ಕ್ರಿಕೆಟ್ ನ ಸೂಪರ್ ಫೋರ್ ಹಂತದ ಎರಡನೇ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 6 ವಿಕೆಟ್ ಗಳ ಸೋಲು ಕಂಡ ಬಳಿಕ ಟೀಂ ಇಂಡಿಯಾ ಆಯ್ಕೆ ಬಗ್ಗೆ ಭಾರೀ ಟೀಕೆ ಕೇಳಿಬಂದಿದೆ.

ನಿನ್ನೆಯ ಪಂದ್ಯದಲ್ಲಿ ಭಾರತ ನೀಡಿದ್ದ 174 ರನ್ ಗಳ ಗುರಿ ಬೆನ್ನತ್ತಿದ ಲಂಕಾ 19.5 ಓವರ್ ಗಳಲ್ಲ 4 ವಿಕೆಟ್ ನಷ್ಟಕ್ಕೆ 174 ರನ್ ಗಳಿಸುವ ಮೂಲಕ ಗೆಲುವಿನ ಕೇಕೆ ಹಾಕಿತು. ಲಂಕಾ ಪರ ಆರಂಭಿಕರಾದ ನಿಸಂಕಾ 52, ಕುಸಾಲ್ ಮೆಂಡಿಸ್ 57 ರನ್ ಗಳ ಕೊಡುಗೆ ನೀಡಿದರು. ಆರಂಭದ 10 ಓವರ್ ಗಳಲ್ಲಿ ಲಂಕಾ ವಿಕೆಟ್ ನಷ್ಟವಿಲ್ಲದೇ 96 ರನ್ ಗಳಿಸಿದ್ದು ಭಾರತದ ಕಳಪೆ ಬೌಲಿಂಗ್ ಗೆ ಸಾಕ್ಷಿಯಾಗಿತ್ತು. ಕೊನೆಯಲ್ಲಿ ಸಿಡಿದ ದಸನು ಶಣಕ 18 ಎಸೆತಗಳಿಂದ 33 ರನ್ ಗಳಿಸಿದರೆ ಅವರಿಗೆ ತಕ್ಕ ಸಾಥ್ ನೀಡಿದ ರಾಜಪಕ್ಸೆ 25 ರನ್ ಗಳ ಕೊಡುಗೆ ನೀಡಿದರು.

ಭಾರತದ ಪರ ಭುವನೇಶ್ವರ್ ಕುಮಾರ್, ಹಾರ್ದಿಕ್ ಪಾಂಡ್ಯ, ಅರ್ಷ್ ದೀಪ್ ಸಿಂಗ್ ವಿಕೆಟ್ ಕೀಳಲು ವಿಫಲವಾಗಿದ್ದೇ ದುಬಾರಿಯಾಯಿತು. ಅದರಲ್ಲೂ ಅರ್ಷ್ ದೀಪ್ ಸಿಂಗ್ 3.5 ಓವರ್ ಗಳಲ್ಲಿ ಭರ್ತಿ 40 ರನ್ ನೀಡಿದರು! ಯಜುವೇಂದ್ರ ಚಾಹಲ್ 3, ರವಿಚಂದ್ರನ್ ಅಶ್ವಿನ್ 1 ವಿಕೆಟ್ ಕಬಳಿಸಿದರು.

ಅನನುಭವಿ ಬೌಲಿಂಗ್ ಪಡೆ, ಪ್ರಮುಖ ವೇಗಿಗಳಿಲ್ಲದೇ ಏಷ್ಯಾ ಕಪ್ ಆಡಲು ಬಂದಿದ್ದು, ಜೊತೆಗೆ ಮಧ್ಯಮ ಕ್ರಮಾಂಕ ಕೈಕೊಟ್ಟಿದ್ದು ಭಾರತಕ್ಕೆ ಈ ಏಷ್ಯಾ ಕಪ್ ನಲ್ಲಿ ಹೊಡೆತ ನೀಡಿತು. ಇದೀಗ ಭಾರತ ಫೈನಲ್ ಹಾದಿ ಕಷ್ಟವಾಗಿದೆ. ಒಂದು ವೇಳೆ ಭಾರತ ಫೈನಲ್ ತಲುಪಬೇಕಾದರೆ ನಾಳೆಯ ಪಂದ್ಯವನ್ನು ಭರ್ಜರಿ ಅಂತರದೊಂದಿಗೆ ಗೆಲ್ಲಬೇಕು. ಜೊತೆಗೆ ಪಾಕಿಸ್ತಾನ ತಂಡ ಬಾಂಗ್ಲಾ ಮತ್ತು ಅಫ್ಘಾನಿಸ್ತಾನ ಎದುರು ಸೋಲಬೇಕು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ