INDvsENG test: 500 ನೇ ವಿಕೆಟ್ ಕಿತ್ತ ಅಶ್ವಿನ್: ಈ ಸಾಧನೆ ಮಾಡಿದ ಎರಡನೇ ಭಾರತೀಯ

Krishnaveni K

ಶುಕ್ರವಾರ, 16 ಫೆಬ್ರವರಿ 2024 (16:00 IST)
Photo Courtesy: Twitter
ರಾಜ್ ಕೋಟ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ನ ಆರಂಭಿಕ ವಿಕೆಟ್ ಕಿತ್ತ ರವಿಚಂದ್ರನ್ ಅಶ್ವಿನ್ ಹೊಸ ದಾಖಲೆ ಮಾಡಿದ್ದಾರೆ.

ರವಿಚಂದ್ರನ್ ಅಶ್ವಿನ್ ಪಾಲಿಗೆ ಇದು ಟೆಸ್ಟ್ ಕ್ರಿಕೆಟ್  ನ 500 ನೇ ವಿಕೆಟ್ ಆಗಿತ್ತು. ಈ ಮೂಲಕ 500 ಪ್ಲಸ್ ವಿಕೆಟ್ ಕಬಳಿಸಿದ ಎರಡನೇ ಭಾರತೀಯ ಆಟಗಾರ ಎಂಬ ಖ್ಯಾತಿಗೆ ಅವರು ಪಾತ್ರರಾದರು. ಇದಕ್ಕೆ ಮೊದಲು ಅನಿಲ್ ಕುಂಬ್ಳೆ 619 ವಿಕೆಟ್ ಕಬಳಿಸಿ ಭಾರತದ ಪರ ಗರಿಷ್ಠ ಟೆಸ್ಟ್ ವಿಕೆಟ್ ಗಳಿಸಿದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಅಶ್ವಿನ್ ಈಗ ಗರಿಷ್ಠ ವಿಕೆಟ್ ಪಡೆದ ಭಾರತೀಯ ಬೌಲರ್ ಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

ಭಾರತ ಮೊದಲ ಇನಿಂಗ್ಸ್ ನಲ್ಲಿ 445 ರನ್ ಗಳಿಗೆ ಆಲೌಟ್‍ ಆಗಿತ್ತು. ಇದನ್ನು ಬೆನ್ನತ್ತಿರುವ ಇಂಗ್ಲೆಂಡ್ ಎಂದಿನಂತೇ ಬೇಝ್ ಬಾಲ್ ಮಾದರಿಯ ಆಟ ಆರಂಭಿಸಿತ್ತು. ಇದರಿಂದಿಗಾಗಿ ಇಂಗ್ಲೆಂಡ್ ಆರಂಭಿಕರು ಕೇವಲ 13.1 ಓವರ್ ಗಳಲ್ಲಿ 89 ರನ್ ಗಳಿಸಿದ್ದರು. ಈ ಸಂದರ್ಭದಲ್ಲಿ ದಾಳಿಗಿಳಿದ ಅಶ್ವಿನ್ ಆರಂಭಿಕ ಜ್ಯಾಕ್ ಕ್ರಾವ್ಲೇ ವಿಕೆಟ್ ಉಡಾಯಿಸಿದರು. ಇದರೊಂದಿಗೆ 500 ವಿಕೆಟ್ ಗಳ ಸಾಧನೆ ಮಾಡಿದರು.

ಇಂಗ್ಲೆಂಡ್ ಇತ್ತೀಚೆಗಿನ ವರದಿ ಬಂದಾಗ 1 ವಿಕೆಟ್ ನಷ್ಟಕ್ಕೆ 137 ರನ್ ಗಳಿಸಿತ್ತು. ಭಾರತ ಬ್ಯಾಟಿಂಗ್ ವೇಳೆ ರವಿಚಂದ್ರನ್ ಅಶ್ವಿನ್ ಪಿಚ್ ನಲ್ಲಿ ಓಡಾಡಿದ್ದಕ್ಕೆ ಅಂಪಾಯರ್ ಇಂಗ್ಲೆಂಡ್ ಗೆ 5 ರನ್ ಗಳ ಪೆನಾಲ್ಟಿ ನೀಡಿದ್ದರು. ಹೀಗಾಗಿ ಇಂಗ್ಲೆಂಡ್ ಬ್ಯಾಟಿಂಗ್ ಗೂ ಮೊದಲೇ 5 ರನ್ ಗಳಿಸಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ