ಮಿಥಾಲಿ ರಾಜ್ ಮೇಲೆ ಗಂಭೀರ ಆರೋಪಗಳ ಸುರಿಮಳೆಗೈದ ಕೋಚ್ ರಮೇಶ್ ಪೊವಾರ್

ಶುಕ್ರವಾರ, 30 ನವೆಂಬರ್ 2018 (09:04 IST)
ಮುಂಬೈ: ಭಾರತ ಮಹಿಳಾ ಕ್ರಿಕೆಟ್ ತಂಡದ ವಿವಾದ ತಾರಕಕ್ಕೇರಿದ್ದು, ಹಿರಿಯ ಆಟಗಾರ್ತಿ ಮಿಥಾಲಿ ರಾಜ್ ಮೇಲೆ ಕೋಚ್ ರಮೇಶ್ ಪೊವಾರ್ ಬಿಸಿಸಿಐಗೆ ಆರೋಪಗಳ ಪಟ್ಟಿಯನ್ನೇ ನೀಡಿದ್ದಾರೆ.


ಇತ್ತೀಚೆಗೆ ಮುಕ್ತಾಯಗೊಂಡ ಮಹಿಳಾ ಟಿ20 ವಿಶ್ವಕಪ್ ನಲ್ಲಿ ಬೇಕೆಂದೇ ತಮ್ಮನ್ನು ಕೈ ಬಿಡಲಾಯಿತು. ಇದಕ್ಕೆ ಕೋಚ್ ರಮೇಶ್ ಪೊವಾರ್ ಮತ್ತು ತಂಡದ ಮ್ಯಾನೇಜ್ ಮೆಂಟ್ ಕಾರಣ ಎಂದು ಮಿಥಾಲಿ ಬಿಸಿಸಿಐಗೆ ಈಮೇಲ್ ಮುಖಾಂತರ ದೂರಿದ್ದರು. ಈ ವಿವಾದದ ಬೆನ್ನಲ್ಲೇ ಕೋಚ್ ರಮೇಶ್ ಇದೀಗ ಬಿಸಿಸಿಐ ಪತ್ರ ಬರೆದಿದ್ದು, ತಮ್ಮ ಮೇಲಿನ ಆರೋಪಗಳಿಗೆ ಸ್ಪಷ್ಟನೆ ನೀಡಿದ್ದಲ್ಲದೆ, ಮಿಥಾಲಿ ಮೇಲೆ ಆರೋಪ ಹೊರಿಸಿದ್ದಾರೆ.

‘ಮಿಥಾಲಿ ಕೋಚ್ ಗಳ ಮೇಲೆ ಒತ್ತಡ ಹೇರುವುದನ್ನು, ತಂಡದ ಹಿತಾಸಕ್ತಿಗಿಂತ ವೈಯಕ್ತಿಕ ಹಿತಾಸಕ್ತಿಯನ್ನು ನೋಡಿಕೊಳ್ಳುವುದನ್ನು ಬಿಡಲಿ. ತನ್ನ ಪಾತ್ರವನ್ನು ಮರೆತು ವೈಯಕ್ತಿಕ ಸಾಧನೆ ಬಗ್ಗೆ ಅವರು ಹೆಚ್ಚು ಆಸಕ್ತಿ ವಹಿಸಿದ್ದಾರೆ. ಇದು ಇತರ ಬ್ಯಾಟ್ಸ್ ಮನ್ ಗಳ ಮೇಲೆ ಒತ್ತಡ ಉಂಟುಮಾಡುತ್ತಿದೆ.

‘ಪಾಕಿಸ್ತಾನದ ವಿರುದ್ಧ ನಾವು ಆಯ್ಕೆಗಾರರ ಒತ್ತಡದಿಂದಾಗಿ ಮತ್ತು ನನ್ನನ್ನು ಆಯ್ಕೆ ಮಾಡದಿದ್ದರೆ ಮನೆಗೆ ಹೋಗುವೆ ಎಂದು ಬ್ಯಾಗ್ ಪ್ಯಾಕ್ ಮಾಡಿ ಮಿಥಾಲಿ ಬೆದರಿಕೆ ಹಾಕಿದ್ದಕ್ಕೆ ತಂಡದ ಮೇಲೆ ಋಣಾತ್ಮಕ ಪರಿಣಾಮ ಬೀರುವುದು ಬೇಡ ಎಂದು ಆಕೆಯನ್ನೇ ಆರಂಭಿಕರಾಗಿ ಕಣಕ್ಕಿಳಿಸಿದ್ದೆವು. ಆಕೆ ತಂಡದಲ್ಲಿ ತನ್ನದೇ ಮೆಚ್ಚಿನ ಆಟಗಾರರ ಪ್ರತ್ಯೇಕ ಗುಂಪು ಮಾಡಿಕೊಂಡಿದ್ದರು. ಆಕೆಯಂತಹ ಹಿರಿಯ ಅನುಭವಿ ಆಟಗಾರ್ತಿ ಈ ರೀತಿ ಗುಂಪುಗಾರಿಕೆ ಮಾಡುವುದು ನಿಜಕ್ಕೂ ಬೇಸರದ ಸಂಗತಿ’ ಎಂದು ಈಮೇಲ್ ಮುಖಾಂತರ ಕೋಚ್ ಪೊವಾರ್ ದೂರಿದ್ದಾರೆ.

ಪೊವಾರ್ ವರದಿಯನ್ನು ಓದಿದ ಮಿಥಾಲಿ ರಾಜ್ ಬೇಸರದಿಂದಲೇ ಪ್ರತಿಕ್ರಿಯಿಸಿದ್ದು ‘ನನ್ನ 20 ವರ್ಷದ ಆಟ, ಅನುಭವ, ಕಮಿಟ್ ಮೆಂಟ್ ಎಲ್ಲವೂ ಇಂದು ವ್ಯರ್ಥವಾಗಿದೆ. ಇಂತಹ ಆರೋಪಗಳಿಂದ ನಿಜಕ್ಕೂ ಬೇಸರವಾಗಿದೆ. ಇಂದು ನನ್ನ ದೇಶಭಕ್ತಿಯನ್ನೇ ಸಂಶಯಪಡಲಾಗಿದೆ. ನನ್ನ ಸಾಮರ್ಥ್ಯವನ್ನೇ ಪ್ರಶ್ನಿಸಲಾಗುತ್ತಿದೆ ಮತ್ತು ಇದು ನನ್ನ ಜೀವನದ ಕರಾಳ ದಿನಗಳು. ದೇವರು ಇದನ್ನೆಲ್ಲಾ ಎದುರಿಸುವ ಶಕ್ತಿ ನನಗೆ ಕೊಡಲಿ’ ಎಂದು ಟ್ವೀಟ್ ಮಾಡಿದ್ದಾರೆ. ಈ ಆರೋಪ-ಪ್ರತ್ಯಾರೋಪಗಳು ಎಲ್ಲಿಗೆ ಬಂದು ನಿಲ್ಲುತ್ತದೋ. ಅಂತೂ ಪುರುಷರ ಕ್ರಿಕೆಟ್ ನಲ್ಲಿ ನಡೆಯುತ್ತಿದ್ದ ಈ ರೀತಿಯ ಗೊಂದಲಗಳು ಇದೀಗ ಮಹಿಳಾ ಕ್ರಿಕೆಟ್ ಗೂ ಕಾಲಿಟ್ಟಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ