ರಾಜಕೀಯಕ್ಕೆ ಗುಡ್ ಬೈ ಹೇಳಿದ ಸಂಸದ, ಕ್ರಿಕೆಟಿಗ ಗೌತಮ್ ಗಂಭೀರ್

Krishnaveni K

ಶನಿವಾರ, 2 ಮಾರ್ಚ್ 2024 (10:45 IST)
Photo Courtesy: Twitter
ನವದೆಹಲಿ: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, ದೆಹಲಿಯ ಹಾಲಿ ಸಂಸದ ಗೌತಮ್ ಗಂಭೀರ್ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಇದನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದಾರೆ.

ಗೌತಮ್ ಗಂಭೀರ್ ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಪೂರ್ವ ದೆಹಲಿಯಲ್ಲಿ ಸ್ಪರ್ಧಿಸಿ ಪ್ರಚಂಡ ಗೆಲುವು ಸಾಧಿಸಿದ್ದರು. ಅದಾದ ಬಳಿಕವೂ ಅವರು ತಮ್ಮ ಐಪಿಎಲ್ ಮೆಂಟರ್ ಸ್ಥಾನದಲ್ಲಿ ಮುಂದುವರಿದಿದ್ದರು. ಅಲ್ಲದೆ, ಕಾಮೆಂಟೇಟರ್ ಆಗಿಯೂ ಕೆಲಸ ಮಾಡುತ್ತಿದ್ದರು. ಇದೇ ಕಾರಣಕ್ಕೆ ಕೆಲವೊಮ್ಮೆ ಟೀಕೆಗೊಳಗಾಗಿದ್ದೂ ಇದೆ.

ಸಂಸದರಾಗಿರುವ ನೀವು ಜನರ ಕೆಲಸ ಮಾಡುವುದನ್ನು ಬಿಟ್ಟು ಕ್ರಿಕೆಟ್ ಫೀಲ್ಡ್ ನಲ್ಲಿ ಏಕಿರುತ್ತೀರಿ ಎಂದು ಹಲವರು ಪ್ರಶ್ನೆ ಮಾಡಿದ್ದು ಇದೆ. ಇದೀಗ ಲೋಕಸಭೆ ಚುನಾವಣೆಗೆ ಕೆಲವೇ ದಿನ ಬಾಕಿಯಿರುವಾಗ ಗೌತಮ್ ಗಂಭೀರ್ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ. ತನ್ನನ್ನು ಪಕ್ಷದ ಯಾವುದೇ ಕೆಲಸಗಳಿಗೆ ಪರಿಗಣಿಸದಂತೆ ಗಂಭೀರ್ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾಗೆ ಮನವಿ ಮಾಡಿದ್ದಾರೆ.

ತನ್ನ ಕ್ರಿಕೆಟ್ ಕೆಲಸಗಳಲ್ಲಿ ಸಂಪೂರ್ಣವಾಗಿ ಗಮನಕೇಂದ್ರೀಕರಿಸಲು ರಾಜಕೀಯ ನಿವೃತ್ತಿ ಅನಿವಾರ್ಯ ಎಂದು ಅವರು ಹೇಳಿದ್ದಾರೆ. ಆದರೆ ಅವರ ಈ ನಿರ್ಧಾರಕ್ಕೆ ಅಭಿಮಾನಿಗಳು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ರಾಜಕೀಯ ಮತ್ತು ಕ್ರಿಕೆಟ್ ಎರಡರಲ್ಲೂ ಯಶಸ್ಸು ಕಂಡ ಅಪರೂಪದ ವ್ಯಕ್ತಿ ನೀವು. ಜೊತೆಗೆ ನಿಮ್ಮಂತಹ ಯುವ ನಾಯಕರ ಅಗತ್ಯ ರಾಜಕೀಯಕ್ಕಿದೆ. ಹೀಗಿರುವಾಗ ನಿವೃತ್ತಿ ಘೋಷಿಸುವುದು ಬೇಡ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಗಂಭೀರ್ ಮಾತ್ರ ತಮ್ಮ ನಿಲುವಿನಲ್ಲಿ ಖಚಿತವಾಗಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ