ಕೋಲ್ಕೊತ್ತಾ ಟೆಸ್ಟ್ ನಲ್ಲಿ ಶ್ರೀಲಂಕಾ ಕ್ರಿಕೆಟಿಗರ ಕಳ್ಳಾಟ!
ಸೋಮವಾರ, 20 ನವೆಂಬರ್ 2017 (08:42 IST)
ಕೋಲ್ಕೊತ್ತಾ: ಹಿಂದೊಮ್ಮೆ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಬೆಂಗಳೂರಿನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಆಸೀಸ್ ನಾಯಕ ಸ್ಟೀವ್ ಸ್ಮಿತ್ ಡಿಆರ್ ಎಸ್ ಪಡೆಯಲು ಡ್ರೆಸ್ಸಿಂಗ್ ರೂಂ ಕಡೆ ನೋಡಿದ್ದು ಭಾರೀ ವಿವಾದಕ್ಕೆ ಕಾರಣವಾಗಿದ್ದು ನೆನಪಿರಬಹುದು.
ಇದೀಗ ಭಾರತ ಮತ್ತು ಶ್ರೀಲಂಕಾ ನಡುವೆ ನಡೆದ ಟೆಸ್ಟ್ ಪಂದ್ಯದಲ್ಲೂ ಅಂತಹದ್ದೇ ಘಟನೆಗಳು ನಡೆದಿದೆ. ತೃತೀಯ ದಿನ ಭುವನೇಶ್ವರ್ ಕುಮಾರ್ ಬ್ಯಾಟಿಂಗ್ ಮಾಡುತ್ತಿದ್ದಾಗ ಶ್ರೀಲಂಕಾ ನಾಯಕ ಫೇಕ್ ಫೀಲ್ಡಿಂಗ್ ಮಾಡಿ ಕೊಹ್ಲಿ ಕೆಂಗಣ್ಣಿಗೆ ಗುರಿಯಾಗಿದ್ದರು.
ನಾಲ್ಕನೇ ದಿನದಾಟದಲ್ಲಿ ಶ್ರೀಲಂಕಾ ಬ್ಯಾಟ್ಸ್ ಮನ್ ದಿಲ್ರುವಾನ್ ಪೆರೇರಾ ಮತ್ತೊಂದು ಡಿಆರ್ ಎಸ್ ನಾಟಕವಾಡಿ ಟೀಕೆಗೊಳಗಾಗಿದ್ದಾರೆ. ಮೊಹಮ್ಮದ್ ಶಮಿ ಎಸೆತದಲ್ಲಿ ಚೆಂಡು ಭುಜಕ್ಕೆ ತಾಗಿದರೂ ಅಂಪಾಯರ್ ಗಳು ಎಲ್ ಬಿ ತೀರ್ಪು ನೀಡಿದರು.
ಆದರೆ ಕೂಡಲೇ ಪೆವಿಲಿಯನ್ ಸಮೀಪ ಹೋಗಿದ್ದ ದಿಲ್ರುವಾನ್ ಮತ್ತೆ ಮೈದಾನಕ್ಕೆ ಮರಳಿ ಡಿಆರ್ ಎಸ್ ಪಡೆದರು. ಅಂಪಾಯರ್ ಗಳು ಇದನ್ನು ಪುರಸ್ಕರಿಸಿ ಡಿಆರ್ ಎಸ್ ಸಲ್ಲಿಕೆಗೆ ಅವಕಾಶ ನೀಡಿದರಲ್ಲದೆ, ದಿಲ್ರುವಾನ್ ನಾಟೌಟ್ ಎಂದು ಸಾಬೀತಾಯಿತು. ಇದು ವ್ಯಾಪಕ ಟೀಕೆಗೆ ಗುರಿಯಾಯಿತು. ಪೆವಿಲಿಯನ್ ಸಮೀಪ ಬಂದಿದ್ದ ದಿಲ್ರುವಾನ್ ಡ್ರೆಸ್ಸಿಂಗ್ ರೂಂನಲ್ಲಿದ್ದವರ ಸಹಾಯ ಪಡೆದಿರಬಹುದು. ಹೀಗಾಗಿ ಅವರಿಗೆ ಮತ್ತೆ ಡಿಆರ್ ಎಸ್ ಸಲ್ಲಿಸಲು ಅವಕಾಶ ನೀಡಬಾರದಿತ್ತು ಎಂದು ವೀಕ್ಷಕ ವಿವರಣೆಕಾರರು ಪ್ರತಿಪಾದಿಸಿದ್ದಾರೆ. ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ