ಮೆಲ್ಬೊರ್ನ್: ಟಿ20 ವಿಶ್ವಕಪ್ 2022 ರ ಚಾಂಪಿಯನ್ ಶಿಪ್ ಕ್ರಿಕೆಟ್ ಜನಕ ಇಂಗ್ಲೆಂಡ್ ಪಾಲಾಗಿದೆ. ಈ ಮೂಲಕ 2010 ರ ಬಳಿಕ ಎರಡನೇ ಬಾರಿಗೆ ಇಂಗ್ಲೆಂಡ್ ತಂಡ ಕಿರು ಮಾದರಿ ವಿಶ್ವಕಪ್ ಗೆದ್ದುಕೊಂಡಿದೆ.
ಇಂದು ಪಾಕಿಸ್ತಾನ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ 5 ವಿಕೆಟ್ ಗಳ ಜಯ ಗಳಿಸುವ ಮೂಲಕ ಮತ್ತೊಮ್ಮೆ ಚಾಂಪಿಯನ್ ಆಗಿ ಹೊರಹೊಮ್ಮಿತು.
ಮೊದಲು ಬ್ಯಾಟಿಂಗ್ ಮಾಡಿದ ಪಾಕ್ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 137 ರನ್ ಗಳಿಸಲಷ್ಟೇ ಶಕ್ತವಾಯಿತು. ರಿಜ್ವಾನ್ 15, ಬಾಬರ್ ಅಜಮ್ 32 ರನ್ ಗಳಿಸಿ ಔಟಾದರು. ಮಸೂದ್ 38 ರನ್ ಗಳ ಅಮೂಲ್ಯ ಕೊಡುಗೆ ನೀಡಿದರು. ಬಹುಶಃ ಅವರು ನಿಂತು ಆಡದೇ ಹೋಗಿದ್ದರೆ ಪಾಕ್ ಗೌರವಯುತ ಮೊತ್ತ ಗಳಿಸಲು ಸಾಧ‍್ಯವಾಗುತ್ತಿರಲಿಲ್ಲ. ಇಂಗ್ಲೆಂಡ್ ಪರ ಸ್ಯಾಮ್ ಕ್ಯುರೇನ್ 3, ಕ್ರಿಸ್ ಜೋರ್ಡಾನ್, ಆದಿಲ್ ರಶೀದ್ ತಲಾ 2 ವಿಕೆಟ್ ಕಬಳಿಸಿದರು.
ಈ ಮೊತ್ತ ಬೆನ್ನತ್ತಿದ ಇಂಗ್ಲೆಂಡ್ ಆರಂಭ ಉತ್ತಮವಾಗಿರಲಿಲ್ಲ. ಕಳೆದ ಪಂದ್ಯದ ಹೀರೋ ಅಲೆಕ್ಸ್ ಹೇಲ್ಸ್ ಕೇವಲ 1 ರನ್ ಗೆ ವಿಕೆಟ್ ಒಪ್ಪಿಸಿದರು. ಜೋಸ್ ಬಟ್ಲರ್ 26 ರನ್ ಗೆ ಇನಿಂಗ್ಸ್ ಸಮಾಪ್ತಿಗೊಳಿಸಿದರು. ಈ ಹಂತದಲ್ಲಿ ನಿಂತು ಆಡಿದ ಬೆನ್ ಸ್ಟೋಕ್ಸ್ 49 ಎಸೆತಗಳಿಂದ 52 ರನ್ ಗಳಿಸಿ ತಂಡಕ್ಕೆ ರೋಚಕ ಜಯ ಕೊಡಿಸುವಲ್ಲಿ ಯಶಸ್ವಿಯಾದರು. ವಿಶೇಷವೆಂದರೆ ಈ ಮೊದಲು ಇಂಗ್ಲೆಂಡ್ ಏಕದಿನ ವಿಶ್ವಕಪ್ ಗೆಲ್ಲುವಾಗಲೂ ಬೆನ್ ಸ್ಟೋಕ್ಸ್ ನಿರ್ಣಾಯಕ ಪಾತ್ರವಹಿಸಿದ್ದರು. ಅಂತಿಮವಾಗಿ ಇಂಗ್ಲೆಂಡ್ 19 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 138 ರನ್ ಗಳಿಸಿ ವಿಶ್ವ ಚಾಂಪಿಯನ್ ಆಯಿತು.