ನ್ಯೂಯಾರ್ಕ್: ಟಿ20 ವಿಶ್ವಕಪ್ 2024 ರಲ್ಲಿ ಯುಎಸ್ ಎ ವಿರುದ್ಧ 7 ವಿಕೆಟ್ ಗಳಿಂದ ಗೆದ್ದ ಟೀಂ ಇಂಡಿಯಾ ಸೂಪರ್ 8 ಕ್ಕೆ ಲಗ್ಗೆಯಿಟ್ಟಿದೆ.
ಮೊದಲು ಬ್ಯಾಟಿಂಗ್ ಮಾಡಿದ ಯುಎಸ್ ಎ ಅರ್ಷ್ ದೀಪ್ ಸಿಂಗ್ ಮಾರಕ ದಾಳಿಗೆ ತತ್ತರಿಸಿ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 110 ರನ್ ಗಳಿಸಲಷ್ಟೇ ಶಕ್ತವಾಯಿತು. ಮೊದಲ ಎಸೆತದಲ್ಲೇ ವಿಕೆಟ್ ಉಡಾಯಿಸಿದ ಅರ್ಷ್ ದೀಪ್ ದಾಖಲೆ ಬರೆದರು. ಯುಎಸ್ ಪರ ಸ್ಟೀವನ್ ಟೈಲರ್ 24, ಎನ್ ಆರ್ ಕುಮಾರ್ 27 ರನ್ ಗಳಿಸಿದರು. ಭಾರತದ ಪರ ಅರ್ಷ್ ದೀಪ್ ಸಿಂಗ್ 4, ಹಾರ್ದಿಕ್ ಪಾಂಡ್ಯ 2, ಅಕ್ಸರ್ ಪಟೇಲ್ 1 ವಿಕೆಟ್ ಕಬಳಿಸಿದರು.
ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಭಾರತ ಆರಂಭದಲ್ಲೇ ಅನುಭವಿಗಳಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೀಡಾಯಿತು. ಕೊಹ್ಲಿ ಮತ್ತೊಮ್ಮೆ ವಿಫಲರಾಗಿ ಮೊದಲ ಎಸೆತಕ್ಕೇ ಔಟಾಗಿ ನಿರಾಸೆ ಮೂಡಿಸಿದರು. ರಿಷಬ್ ಪಂತ್ ಭರವಸೆ ಮೂಡಿಸಿದರಾದರೂ 18 ರನ್ ಗಳಿಗೆ ಒಪ್ಪಿಸಿದರು.
ಆದರೆ ಬಳಿಕ ತಂಡಕ್ಕೆ ಆಧಾರವಾದ ಸೂರ್ಯಕುಮಾರ್ ಯಾದವ್ 49 ಎಸೆತಗಳಲ್ಲಿ 50 ರನ್ ಗಳಿಸಿ ಅಜೇಯರಾಗುಳಿದರೆ ಅವರಿಗೆ ಸಾಥ್ ನೀಡಿದ ಶಿವಂ ದುಬೆ 35 ಎಸೆತಗಳಲ್ಲಿ 31 ರನ್ ಗಳಿಸಿ ತಂಡದ ಗೆಲುವಿನ ರೂವಾರಿಯಾದರು. ಯುಎಸ್ ಎ ಪರ ಸೌರಭ್ ನೆತ್ರಾವಾಲ್ಕರ್ 2 ವಿಕೆಟ್ ಕಬಳಿಸಿದರು. ಅಂತಿಮವಾಗಿ ಭಾರತ 18.2 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 111 ರನ್ ಗಳಿಸಿತು. ಆಡಿದ ಮೂರೂ ಪಂದ್ಯಗಳಲ್ಲಿ ಗೆಲುವು ಸಾಧಿಸಿದ ಭಾರತ ಸುಲಭವಾಗಿ ಸೂಪರ್ 8 ಕ್ಕೆ ಲಗ್ಗೆಯಿಟ್ಟಿದೆ.