ನೂತನ ಕೋಚ್ ಗೆ ಬಿಸಿಸಿಐ ಸರ್ಪೈಸ್ ಮೆಸೇಜ್ ಒಂದನ್ನು ನೀಡಿದೆ. ಅದಕ್ಕಾಗಿ ಗಂಭೀರ್ ಅವರನ್ನು ಕರೆದು ಲ್ಯಾಪ್ ಟಾಪ್ ಎದುರು ಕೂರಲು ಹೇಳಿದೆ. ಬಳಿಕ ಬಟನ್ ಪ್ರೆಸ್ ಮಾಡಿದಾಗ ಅಲ್ಲಿ ರಾಹುಲ್ ದ್ರಾವಿಡ್ ಅವರ ಸುಂದರ ಮೆಸೇಜ್ ಒಂದು ಪ್ಲೇ ಆಗುತ್ತದೆ. ಇದರಲ್ಲಿ ತಂಡದ ಬಗ್ಗೆ ಮತ್ತು ತಂಡಕ್ಕೆ ಕೋಚ್ ಆಗಿ ಕೆಲಸ ಮಾಡುವ ಬಗ್ಗೆ ದ್ರಾವಿಡ್ ಕಿವಿ ಮಾತು ಹೇಳಿ ತಮ್ಮ ಅಧಿಕಾರ ಹಸ್ತಾಂತರಿಸಿದ್ದಾರೆ. ಇದು ಗಂಭೀರ್ ರನ್ನೂ ಭಾವುಕರಾಗಿರಿಸಿದೆ.
ಹಾಯ್ ಗೌತಮ್, ಭಾರತೀಯ ತಂಡದ ಕೋಚ್ ಆಗಿ ವಿಶ್ವದ ಅತ್ಯಂತ ಎಕ್ಸೈಟಿಂಗ್ ಕೆಲಸಕ್ಕೆ ನಿಮಗೆ ಸ್ವಾಗತ. ನಾನು ಭಾರತ ತಂಡದ ಕೋಚ್ ಆಗಿ ನಾನು ಕಲ್ಪನೆ ಮಾಡಿರುವುದಕ್ಕಿಂತಲೂ ಅದ್ಭುತವಾಗಿ ನಿವೃತ್ತಿಯಾಗಿ ಮೂರು ವಾರ ಕಳೆದಿದೆ. ಎಲ್ಲಕ್ಕಿಂತ ಹೆಚ್ಚಾಗಿ ಈ ತಂಡದ ಜೊತೆ ನನ್ನ ನೆನಪುಗಳು ಮತ್ತು ತಂಡದ ಆಟಗಾರರೊಂದಿಗೆ ಗೆಳೆತನವನ್ನು ನಾನು ಎಂದೆಂದಿಗೂ ಜೋಪಾನವಾಗಿಡುತ್ತೇನೆ. ಭಾರತ ತಂಡದ ಕೋಚ್ ಆಗಿ ನಿಮಗೂ ಇದೇ ರೀತಿಯ ಸ್ನೇಹ ಸಿಗಲಿ ಎಂದು ಹಾರೈಸುತ್ತೇನೆ. ನಿಮಗೂ ಎಲ್ಲಾ ಮಾದರಿಯ ತಂಡದಲ್ಲೂ ಫುಲ್ ಫಿಟ್ ಆಗಿರುವ ಆಟಗಾರರೇ ಸಿಗಲಿ ಎಂದು ಹಾರೈಸುತ್ತೇನೆ. ಒಬ್ಬ ಸಹ ಆಟಗಾರನಾಗಿ ನೀವು ಯಾವತ್ತೂ ತಂಡಕ್ಕಾಗಿ ಆಡಿರುವುದನ್ನು ನೋಡಿದ್ದೇನೆ. ಐಪಿಎಲ್ ಸೀಸನ್ ನಲ್ಲಿ ನಿಮ್ಮ ಗೆಲುವಿನ ಹಸಿವನ್ನು ನೋಡಿದ್ದೇನೆ. ಯುವ ಕ್ರಿಕೆಟಿಗರಿಂದ ಸಾಮರ್ಥ್ಯ ಹೊರಗೆಳೆಯುವುದನ್ನು ನೋಡಿದ್ದೇನೆ. ನೀವು ಭಾರತೀಯ ಕ್ರಿಕೆಟ್ ಬಗ್ಗೆ ಎಷ್ಟು ಅರ್ಪಣಾ ಭಾವ ಹೊಂದಿದ್ದೀರಿ ಎಂದು ನನಗೆ ಗೊತ್ತಿದೆ. ಈ ಹೊಸ ಕೆಲಸದಲ್ಲೂ ನೀವು ಈ ಎಲ್ಲಾ ಗುಣಗಳನ್ನು ಹೊರ ತರಲಿದ್ದೀರಿ ಎಂದು ನನಗೆ ಗೊತ್ತು.
ಆದರೆ ನಿಮಗೇ ಗೊತ್ತು, ಈ ಕೆಲಸದಲ್ಲಿ ನಿರೀಕ್ಷೆಗಳು ಬೆಟ್ಟದಷ್ಟಿರುತ್ತದೆ, ಟೀಕೆಗಳು ಅಷ್ಟೇ ತೀವ್ರವಾಗಿರುತ್ತದೆ. ಆದರೆ ನೀವು ಯಾವತ್ತೂ ಏಕಾಂಗಿಯಾಗಿರಲಿಲ್ಲ. ನಿಮಗೆ ಯಾವತ್ತೂ ಸಹಾಯಕ ಸಿಬ್ಬಂದಿಗಳು, ಆಟಗಾರರು, ಮ್ಯಾನೇಜ್ ಮೆಂಟ್, ಅಭಿಮಾನಿಗಳ ಬೆಂಬಲ ಇದ್ದೇ ಇರುತ್ತದೆ. ನೀವು ಭಾರತ ತಂಡವನ್ನು ಇನ್ನಷ್ಟು ಉನ್ನತಿಗೆ ಕೊಂಡೊಯ್ಯುತ್ತೀರಿ ಎಂಬ ವಿಶ್ವಾಸವಿದೆ ಎಂದು ದ್ರಾವಿಡ್ ಸಂದೇಶ ನೀಡಿದ್ದಾರೆ.