IND vs AUIS: ಕೆಎಲ್ ರಾಹುಲ್ ನನ್ನೇ ಹೊರದಬ್ಬಲು ಯೋಚಿಸಿದ್ರಲ್ಲಾ

Krishnaveni K

ಮಂಗಳವಾರ, 17 ಡಿಸೆಂಬರ್ 2024 (09:31 IST)
Photo Credit: X
ಬ್ರಿಸ್ಬೇನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯಲ್ಲಿ ಎಲ್ಲರೂ ವಿಫಲರಾಗುತ್ತಿರುವಾಗ ನಿಯಮಿತವಾಗಿ ಉತ್ತಮ ಪ್ರದರ್ಶನ ನೀಡುತ್ತಿರುವುದು ಕೆಎಲ್ ರಾಹುಲ್ ಮಾತ್ರ. ಈ ಪಂದ್ಯದಲ್ಲೂ 84 ರನ್ ಸಿಡಿಸಿದ ಅವರು ಟೆಸ್ಟ್ ಇನಿಂಗ್ಸ್ ಹೇಗೆ ಆಡಬೇಕೆಂದು ಎಲ್ಲರಿಗೂ ತೋರಿಸಿಕೊಟ್ಟರು. ಅವರ ಈ ಇನಿಂಗ್ಸ್ ನೋಡಿದ ಮೇಲೆ ಅವರನ್ನೇ ಹೊರ ಹಾಕಲು ನೋಡಿದ್ರಲ್ಲಾ ಎಂದು ಫ್ಯಾನ್ಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನ್ಯೂಜಿಲೆಂಡ್ ವಿರುದ್ಧದ ಸರಣಿಗೂ ಮುನ್ನ ನಾಯಕ ರೋಹಿತ್ ಶರ್ಮಾ ಪತ್ರಿಕಾಗೋಷ್ಠಿಯಲ್ಲಿ ಇದು ಅವರಿಗೆ ಕೊನೆಯ ಅವಕಾಶ ಎಂಬಂತೆ ಮಾತನಾಡಿದ್ದರು. ಆದರೂ ಮೊದಲ ಪಂದ್ಯದಲ್ಲೇ ವಿಫಲರಾದಾಗ ಅವರನ್ನು ತಂಡದ ಆಡುವ ಬಳಗದಿಂದ ಕೈ ಬಿಡಲಾಯಿತು.

ಹಾಗಿದ್ದರೂ ಅವರನ್ನು ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಆಯ್ಕೆ ಮಾಡಿದಾಗ ಹಲವರು ವ್ಯಂಗ್ಯ ಮಾಡಿದ್ದರು. ಕೊನೆಗೆ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಅನಿವಾರ್ಯವಾಗಿ ಅವರು ಓಪನರ್ ಆದರು. ಆಗಲೂ ಕೆಎಲ್ ರಾಹುಲ್ ರಿಂದ ಏನೂ ಆಗಲ್ಲ ಎಂದೆ ಎಲ್ಲರೂ ಅಂದುಕೊಮಡಿದ್ದರು.

ಆದರೆ ಓಪನಿಂಗ್ ಸ್ಥಾನ ಸಿಕ್ಕರೆ ಅದರಲ್ಲೂ ವಿದೇಶೀ ನೆಲದಲ್ಲಿ ತಾನೆಷ್ಟು ಉಪಯುಕ್ತ ಎಂಬುದನ್ನು ಅವರು ಕಳೆದ ಮೂರೂ ಪಂದ್ಯಗಳಲ್ಲಿ ತೋರಿಸಿಕೊಟ್ಟಿದ್ದಾರೆ. ಉಳಿದೆಲ್ಲಾ ಆಟಗಾರರು ವಿಫಲರಾಗಿರುವಾಗ ರಾಹುಲ್ ಒಬ್ಬರೇ ಏಕಾಂಗಿ ಹೋರಾಟ ನಡೆಸುತ್ತಿದ್ದಾರೆ. ಹೀಗಾಗಿ ಈಗ ನೆಟ್ಟಿಗರು ಇಂಥಾ ಆಟಗಾರನನ್ನು ತಂಡದಿಂದ ಹೊರದಬ್ಬುವ ಯೋಚನೆ ಮಾಡಿದ್ರಲ್ಲಾ ಎನ್ನುತ್ತಿದ್ದಾರೆ.

ಮೂರನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನವಾದ ಇಂದೂ ಭಾರತದ ಬ್ಯಾಟಿಂಗ್ ವೈಫಲ್ಯ ಮುಂದುವರಿದಿದೆ. ಇತ್ತೀಚೆಗಿನ ವರದಿ ಬಂದಾಗ 6 ವಿಕೆಟ್ ನಷ್ಟಕ್ಕೆ 167 ರನ್ ಗಳಿಸಿದೆ. ಕೆಎಲ್ ರಾಹುಲ್ ಮತ್ತೊಂದು ಅದ್ಭುತ ಇನಿಂಗ್ಸ್ ಆಡಿ 129 ಎಸೆತ ಎದುರಿಸಿ 84 ರನ್ ಗಳಿಸಿದರು. ಆದರೆ ದುರದೃಷ್ಟವಶಾತ್ ಒಂದು ಶತಕ ಮಿಸ್ ಆಯಿತು. ಅವರ ಈ ಇನಿಂಗ್ಸ್ ಗೆ ಅಭಿಮಾನಿಗಳ ಗೌರವ ಸಿಕ್ಕಿದೆ.

ಇತ್ತೀಚೆಗಿನ ವರದಿ ಬಂದಾಗ ರವೀಂದ್ರ ಜಡೇಜಾ ಔಟಾಗದೇ 41 ಮತ್ತು ನಿತೀಶ್ ಕುಮಾರ್ ರೆಡ್ಡಿ 7 ರನ್ ಗಳಿಸಿ ಆಡುತ್ತಿದ್ದಾರೆ. ನಿನ್ನೆ ಅಜೇಯರಾಗುಳಿದಿದ್ದ ರೋಹಿತ್ ಶರ್ಮಾ ಕೇವಲ 10 ರನ್ ಗಳಿಸಿ ಔಟಾದರು. ಇದೀಗ ಮಳೆಯ ಕಾರಣಕ್ಕೆ ಆಟ ಕೆಲವು ಕಾಲ ಸ್ಥಗಿತಗೊಂಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ