IND vs AUS Test: ಗೌತಮ್ ಗಂಭೀರ್ ಗೆ ತಂಡದ ಆಯ್ಕೆ ಮಾಡಕ್ಕೂ ಬರಲ್ಲ

Krishnaveni K

ಶುಕ್ರವಾರ, 22 ನವೆಂಬರ್ 2024 (11:28 IST)
ಪರ್ತ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್ ಹುಳುಕು ಮತ್ತೊಮ್ಮೆ ಬಟಾ ಬಯಲಾದ ಬೆನ್ನಲ್ಲೇ ಕೋಚ್ ಗೌತಮ್ ಗಂಭೀರ್ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಇತ್ತೀಚೆಗಿನ ವರದಿ ಬಂದಾಗ ಭಾರತ 6 ವಿಕೆಟ್ ಕಳೆದುಕೊಂಡು 82 ರನ್ ಗಳಿಸಿ ಶೋಚನೀಯ ಸ್ಥಿತಿಯಲ್ಲಿದೆ. ಮತ್ತೊಮ್ಮೆ ಟಾಪ್ ಬ್ಯಾಟಿಗರು ಕೈ ಕೊಟ್ಟಿದ್ದಾರೆ. ಅದರಲ್ಲೂ ಈ ಪಂದ್ಯಕ್ಕೆ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಆಟಗಾರರ ಕ್ರಮಾಂಕದ ಜೊತೆಗೆ ವಿಚಿತ್ರವಾಗಿ ಆಡುವ ಬಳಗವನ್ನು ಆಯ್ಕೆ ಮಾಡಲಾಗಿದೆ ಎಂದು ಫ್ಯಾನ್ಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂದು ತಂಡದ ಆರಂಭಿಕರಾಗಿ ಕೆಎಲ್ ರಾಹುಲ್ ಮತ್ತು ಯಶಸ್ವಿ ಜೈಸ್ವಾಲ್ ಕಣಕ್ಕಿಳಿದರು. ಆದರೆ ನ್ಯೂಜಿಲೆಂಡ್ ಸರಣಿಯಲ್ಲಿ ಶತಕ ಸಿಡಿಸಿದ್ದ ಸರ್ಫರಾಜ್ ಖಾನ್ ರನ್ನು ತಂಡದಿಂದ ಹೊರಹಾಕಲಾಗಿದೆ. ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್ ಟೀಂ ಇಂಡಿಯಾದ ಟೆಸ್ಟ್ ತಂಡದ ಅವಿಭಾಜ್ಯ ಅಂಗ. ಸಂಕಷ್ಟದ ಸಮಯದಲ್ಲಿ ಬ್ಯಾಟಿಂಗ್ ಕೂಡಾ ಮಾಡಬಲ್ಲರು. ಆದರೆ ಇಬ್ಬರನ್ನೂ ಹೊರಗಿಡಲಾಗಿದೆ. ಸ್ಪಿನ್ನರ್ ರೂಪದಲ್ಲಿ ವಾಷಿಂಗ್ಟನ್ ಸುಂದರ್ ಇದ್ದಾರೆ. ಮತ್ತೊಬ್ಬ ಬ್ಯಾಟಿಗನ ರೂಪದಲ್ಲಿ ಧ್ರುವ ಜ್ಯುರೆಲ್ ರನ್ನು ಆಯ್ಕೆ ಮಾಡಲಾಗಿದೆ. ಆಕಾಶ್ ದೀಪ್ ಬದಲಿಗೆ ಹರ್ಷಿತ್ ರಾಣಾಗೆ ಅವಕಾಶ ನೀಡಲಾಗಿದೆ.

ತಂಡದಲ್ಲಿ ಇಷ್ಟೊಂದು ಬದಲಾವಣೆ ಮಾಡಿದರೂ ಎಳ್ಳಷ್ಟೂ ಉಪಯೋಗವಾಗಿಲ್ಲ. ಮತ್ತೆ ಟೀಂ ಪೆವಿಲಿಯನ್ ಪೆರೇಡ್ ಮುಂದುವರಿದಿದೆ. ಇದರಿಂದ ಅಭಿಮಾನಿಗಳ ಆಕ್ರೋಶ ಮಿತಿ ಮೀರಿದೆ. ಕೋಚ್ ಗೌತಮ್ ಗಂಭೀರ್ ತಂಡದ ಆಯ್ಕೆ ಬಗ್ಗೆಯೇ ಪ್ರಶ್ನೆ ಮಾಡಿದ್ದಾರೆ. ಗಂಭೀರ್ ಗೆ ಯಾವುದೇ ಬುದ್ಧಿವಂತಿಕೆಯಿಲ್ಲ. ತಂಡವನ್ನು ಹೇಗೆ ಆಯ್ಕೆ ಮಾಡಬೇಕೆಂದೇ ಗೊತ್ತಿಲ್ಲ ಎಂದು ಕಿಡಿ ಕಾರಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ